ಶ್ಲೋಕ – 11
ಅಫಲಾಕಾಂಕ್ಷಿ ಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ ।
ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ವಿಕಃ ॥೧೧॥
ಅಫಲ ಆಕಾಂಕ್ಷಿಭಿಃ ಯಜ್ಞಃ ವಿಧಿದೃಷ್ಟೋ ಯಃ ಇಜ್ಯತೇ ।
ಯಷ್ಟವ್ಯಮ್ ಏವ ಇತಿ ಮನಃ ಸಮಾಧಾಯ ಸಃ ಸಾತ್ವಿಕಃ –ಶಾಸ್ತ್ರದ ಕಟ್ಟಳೆಗೆ ಸರಿಯಾಗಿ, ಫಲದ ನಂಟಿಲ್ಲದೆ, ಕರ್ತವ್ಯ ಎನ್ನುವ ಭಾವದಿಂದ ಮನ ಮೆಚ್ಚಿ ಮಾಡುವ ಯಜ್ಞ ಸಾತ್ವಿಕ ಯಜ್ಞ.
ಯಜ್ಞ ಮಾಡುವವರೆಲ್ಲ ಸಾತ್ವಿಕರಲ್ಲ. ಯಜ್ಞದಲ್ಲೂ ಸಾತ್ವಿಕ, ರಾಜಸ ಮತ್ತು ತಾಮಸವೆಂಬ ಮೂರು ಪ್ರಭೇದವಿದೆ. ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಯಜ್ಞ ಹೇಗಿರುತ್ತದೆ ಎನ್ನುವುದನ್ನು ವಿವರಿಸಿದ್ದಾನೆ. ಯಜ್ಞ ಎಂದರೆ ಕೇವಲ ಅಗ್ನಿಕುಂಡದಲ್ಲಿ ಮಾಡುವ ಪೂಜೆ ಮಾತ್ರ ಅಲ್ಲ. ಪೀಠದಲ್ಲಿ ಭಗವಂತನನ್ನು ಪೂಜಿಸುವುದೂ ಯಜ್ಞ, ಮಾನಸಿಕವಾಗಿ ಭಗವಂತನ ಧ್ಯಾನ ಮಾಡುವುದೂ ಯಜ್ಞ. ಯಾವುದೇ ಫಲ ಕಾಮನೆ ಇಲ್ಲದೆ, ದೇವರು ಪ್ರಸನ್ನನಾಗಲಿ-ಆತನ ದಯಾ ದೃಷ್ಟಿ ನನ್ನ ಮೇಲಿರಲಿ ಎಂದು, ವಿಧಿಪೂರ್ವಕವಾಗಿ ಮಾಡುವ ಪೂಜೆ ಸಾತ್ವಿಕ ಯಜ್ಞವೆನಿಸುತ್ತದೆ. ಯಾಂತ್ರಿಕವಾಗಿ, ಮಂತ್ರದ ಅರ್ಥ ಗೊತ್ತಿಲ್ಲದೆ, ಯಾವುದೋ ಸಂಕುಚಿತ ಫಲಾಪೇಕ್ಷೆಯಿಂದ ಪೂಜೆ ಮಾಡಿದರೆ ಅದು ಸಾತ್ವಿಕ ಯಜ್ಞವಾಗುವುದಿಲ್ಲ.
ಇಲ್ಲಿ ‘ವಿಧಿಪೂರ್ವಕವಾಗಿ’ ಎಂದು ಹೇಳಲಾಗಿದೆ. ಇದು ಬಹಳ ಮುಖ್ಯವಾದ ವಿಚಾರ. ಉದಾಹರಣೆಗೆ ನಾವು ಪೂಜೆ ಮಾಡುವಾಗ ಘಂಟಾನಾದ ಮಾಡುತ್ತೇವೆ; ಶಂಖನಾದ ಮಾಡುತ್ತೇವೆ. ಈ ರೀತಿ ಯಾವುದೇ ಪೂಜಾ ವಿಧಾನವಿದ್ದರೂ ಕೂಡ, ಅದನ್ನು ಮಾಡುವ ಮೊದಲು ಏಕೆ ಮಾಡುತ್ತಿದ್ದೇವೆ ಎನ್ನುವ ತಿಳುವಳಿಕೆ ನಮಗೆ ಅಗತ್ಯ. ಘಂಟೆಯನ್ನು ಗಣಗಣ ಎಂದು ಕರ್ಕಶವಾಗಿ ಒಂದೇ ಸಮನೆ ಬಾರಿಸಬಾರದು. ಘಂಟಾನಾದ ಮಾಡುವಾಗ ಅದರಿಂದ ಓಂಕಾರನಾದ ಹೊರ ಹೊಮ್ಮಬೇಕು. ಈ ರೀತಿ ಓಂಕಾರ ನಾದ ಹೊರಹೊಮ್ಮಿದಾಗ- ಆ ನಾದ ಕೇಳಿಸುವ ಪ್ರದೇಶದಲ್ಲಿರುವ ಎಲ್ಲ ದುಷ್ಟ ಶಕ್ತಿಗಳೂ ಅಲ್ಲಿಂದ ಓಡಿ ಹೋಗುತ್ತವೆ ಮತ್ತು ಈ ನಾದ ದೇವತಾ ಶಕ್ತಿಗಳನ್ನು ಆಕರ್ಷಿಸುತ್ತದೆ. ಇದರಿಂದ ಪೂಜೆಗೆ ಬೇಕಾದ ಶುಭ್ರ ವಾತಾವರಣ ನಿರ್ಮಾಣವಾಗುತ್ತದೆ. ಇಲ್ಲಿ ಮನಃಪೂರ್ವಕವಾಗಿ ದುಷ್ಟಶಕ್ತಿಗಳು ಹೋಗಲಿ, ದೇವತಾಶಕ್ತಿಗಳು ಬರಲಿ ಎಂದು ಪ್ರಾರ್ಥಿಸಿ, ಘಂಟೆಯಿಂದ ಓಂಕಾರನಾದ ತೆಗೆಯುವುದು ಬಹಳ ಮುಖ್ಯ. ಘಂಟೆಯಿಂದ ಎಂದೂ ಅಪಸ್ವರ ಬರಬಾರದು. ಘಂಟಾನಾದಕ್ಕೆ ಒಂದು ಶ್ರುತಿ ಇದೆ. ಸಪ್ತ ಸ್ವರಗಳಿಗೆ ಸಪ್ತ ಸ್ವರದ ಘಂಟೆಗಳಿವೆ. ಅದನ್ನು ಶ್ರುತಿಬದ್ಧವಾಗಿ ಬಾರಿಸಬೇಕು. ಇದು ಓಂಕಾರದಿಂದ ವಾತಾವರಣ ಶುದ್ಧಿ ಮಾಡುವ ಅದ್ಭುತ ಪ್ರಕ್ರಿಯೆ. ಇದು ಕೇವಲ ಒಂದು ಉದಾಹರೆಣೆಯಷ್ಟೆ. ಹೀಗೆ ನಾವು ನಮ್ಮ ಪ್ರತಿಯೊಂದು ಕ್ರಿಯೆಯನ್ನು ತಿಳಿದು ಮನಃಪೂರ್ವಕವಾಗಿ ಮಾಡಬೇಕು; ಮಾಡುವ ಕ್ರಿಯೆಯಲ್ಲಿ ನಮಗೆ ಖುಷಿ ಇರಬೇಕು. ಹೀಗೆ ಮಾಡಿದಾಗ ಮಾತ್ರ ಅದು ಸಾತ್ವಿಕ ಯಜ್ಞ ಎನಿಸುತ್ತದೆ.
