ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನದ ಅಭಿಜ್ಞಾ ಕಲಾ ಕೇಂದ್ರದ ವತಿಯಿಂದ, ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ಸಹಕಾರದಲ್ಲಿ ಆಯೋಜಿಸಿದ್ದ ಭರತನಾಟ್ಯ ಕಾರ್ಯಕ್ರಮದಲ್ಲಿ ಹಾಸನದ ನೃತ್ಯಪಟು ವಿದೂಷಿ ಸಮೀಕ್ಷಾ ಕೆ.ಎಂ. ಹಾಗೂ ಮೈಸೂರಿನ ಪೂಜಾ ಸುಗಂ ಅವರು ನೀಡಿದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ದೇವರನಾಮಗಳ ಮೂಲಕ ಭಕ್ತಿ, ನೈತಿಕ ಮೌಲ್ಯ ಹಾಗೂ ಪುರಾಣ ಕಥಾನಕಗಳನ್ನು ನೃತ್ಯರೂಪದಲ್ಲಿ ಪ್ರಸ್ತುತಪಡಿಸಲಾಯಿತು. ಭಕ್ತಿ ಪಂಥದ ಫಲಶ್ರುತಿಯಾಗಿ ಬೆಳವಣಿಗೆಯಾದ ದಾಸ ಸಾಹಿತ್ಯದಲ್ಲಿ ಭಕ್ತಿ, ನೀತಿ ಮತ್ತು ತತ್ವಚಿಂತನೆಗಳು ಅಡಕವಾಗಿದ್ದು, ಸರಳ ಭಾಷೆ ಹಾಗೂ ನೇರ ಅಭಿವ್ಯಕ್ತಿಯ ಮೂಲಕ ದೇವರನಾಮಗಳು ಭಕ್ತ ಮತ್ತು ಪರಮಾತ್ಮನ ನಡುವಿನ ಸೇತುವೆಯಾಗಿ ನಿಲ್ಲುತ್ತವೆ ಎಂಬುದನ್ನು ನಿರೂಪಣೆಯ ಮೂಲಕ ವಿವರಿಸಲಾಯಿತು.
ಪುರಂದರ ದಾಸರ ಸುಪ್ರಸಿದ್ಧ ‘ಆಡಿಸಿದಳೆ ಯಶೋದ ಜಗದೋದ್ಧಾರನಾ’ ಕೃತಿಯನ್ನು ಕಾಪಿ ರಾಗ ಹಾಗೂ ಆದಿ ತಾಳದಲ್ಲಿ ನೃತ್ಯರೂಪದಲ್ಲಿ ಪ್ರಸ್ತುತಪಡಿಸಲಾಯಿತು. ಯಶೋದೆ ತಾಯಿ ಬಾಲಕೃಷ್ಣನನ್ನು ಮುದ್ದಾಡುವ ಭಾವ, ಮಾತೃವಾತ್ಸಲ್ಯ ಹಾಗೂ ಕೃಷ್ಣನ ಬಾಲಲೀಲೆಗಳು ನೃತ್ಯದಲ್ಲಿ ಮನೋಜ್ಞವಾಗಿ ಮೂಡಿಬಂದವು.

ಶಿವನ ಮೂರನೇ ಕಣ್ಣಿನಿಂದ ಹುಟ್ಟಿ ಶಿವಪುತ್ರನೆನಿಸಿಕೊಂಡ ಕಾರ್ತಿಕೇಯನ ಕುರಿತಾದ ಪ್ರಸ್ತುತಿಯೂ ಗಮನ ಸೆಳೆಯಿತು. ಮಯೂರ ವಾಹನನಾದ ಸುಬ್ರಹ್ಮಣ್ಯನು ಸೂರಪದ್ಮನನ್ನು ಸಂಹರಿಸಿ, ವಳ್ಳಿ ಮತ್ತು ದೇವಯಾನಿಯನ್ನು ವರಿಸಿ ಲೋಕವನ್ನು ಕಾಪಾಡಿದ ಕಥೆಯನ್ನು ಶ್ರೀ ಮಧುರೈ ಮುರಳೀಧರನ್ ಅವರ ರಚನೆಯ ಮೂಲಕ ಷಣ್ಮುಖಪ್ರಿಯ ರಾಗ, ಆದಿ ತಾಳದಲ್ಲಿ ಅಭಿವ್ಯಕ್ತಿಸಲಾಯಿತು.
ಪಾಂಡ್ಯ ರಾಜನ ಪುತ್ರಿ ಮಧುರೆಯ ಮೀನಾಕ್ಷಿಯ ಕುರಿತಾದ ನೃತ್ಯಪ್ರಸ್ತುತಿಯಲ್ಲಿ ಆಕೆಯ ಶೌರ್ಯ, ರಾಜಕೀಯ ಸಾಮರ್ಥ್ಯ ಹಾಗೂ ಶಿವನನ್ನು ಭೇಟಿಯಾದ ಸಂದರ್ಭದ ಪೌರಾಣಿಕ ಕಥೆಯನ್ನು ಬಿಂಬಿಸಲಾಯಿತು. ಮೂರು ಸ್ತನಗಳೊಂದಿಗೆ ಜನಿಸಿದ ಮೀನಾಕ್ಷಿ, ತನ್ನ ನಾಯಕನಾದ ಶಿವನನ್ನು ಕಂಡಾಗ ಮೂರನೇ ಸ್ತನ ಕಳೆದುಕೊಂಡ ಕಥಾನಕವನ್ನು ಭಾವಾಭಿನಯದ ಮೂಲಕ ಕಟ್ಟಿಕೊಡಲಾಯಿತು. ಶ್ರೀ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ಈ ಕೃತಿ ವರಾಳಿ ರಾಗ ಹಾಗೂ ಮಿಶ್ರಚಾಪು ತಾಳದಲ್ಲಿ ಮೂಡಿಬಂತು.

ಕೃಷ್ಣನ ಕುರಿತಾದ ಮತ್ತೊಂದು ನೃತ್ಯಪ್ರಸ್ತುತಿಯಲ್ಲಿ ಪದವರ್ಣ, ಜತಿಗಳ ಝೇಂಕಾರ, ಪದಗಳ ಮಾಧುರ್ಯ ಹಾಗೂ ಭಾವಾಭಿನಯದ ಸೊಗಡನ್ನು ಕಲಾವಿದರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು. ಕೃಷ್ಣನಿಗಾಗಿ ಹಾತೊರೆಯುವ ಇಬ್ಬರು ನಾಯಕಿಯರ ವಿರಹವೇದನೆ, ಕೃಷ್ಣನನ್ನು ಕರೆಯುತ್ತಿದ್ದರೂ ಬಾರದಿರುವುದಕ್ಕೆ ಅವರ ಅಳಲು ಹಾಗೂ ಮನ್ಮಥನ ಪುಷ್ಪಬಾಣಗಳಿಂದ ಉಂಟಾಗುವ ವಿರಹದ ನೋವನ್ನು ನೃತ್ಯದ ಮೂಲಕ ಮನಮುಟ್ಟುವಂತೆ ಪ್ರದರ್ಶಿಸಲಾಯಿತು.
‘ಗಾನಂ ಇಸೈತ್ ನಿಂಡ್ರಾಯೊ’ ಎಂಬ ಪದವರ್ಣವು ರಾಗಮಾಲಿಕೆ ಹಾಗೂ ಆದಿ ತಾಳದಲ್ಲಿ ಶ್ರೀ ಮಧುರೈ ಮುರಳೀಧರನ್ ಅವರ ರಚನೆಯಾಗಿ ಪ್ರೇಕ್ಷಕರ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೆ ಸಂಗೀತ ಸಾಂಗತ್ಯದಲ್ಲಿ ನಟುವಾಂಗ ಶ್ರೀ ಡಿ.ವಿ. ಪ್ರಸನ್ನಕುಮಾರ್, ಹಾಡುಗಾರಿಕೆಯಲ್ಲಿ ಶ್ರೀ ದೀಪು ಕರುಣಾಕರನ್, ಮೃದಂಗದಲ್ಲಿ ಶ್ರೀ ರಂಗ ಸಿ.ಟಿ., ಪ್ಲ್ಯೂಟ್ನಲ್ಲಿ ಎ.ಪಿ. ಕೃಷ್ಣಪ್ರಸಾದ್ ಹಾಗೂ ಬೆಳಕಿನ ನಿರ್ವಹಣೆಯಲ್ಲಿ ಶ್ರೀ ಸೂರ್ಯ ರಾವ್ ಸಹಕರಿಸಿದರು.
— ಗೊರೂರು ಅನಂತರಾಜು, ಹಾಸನ
