ಚನ್ನರಾಯಪಟ್ಟಣ: “ಸಾಧನೆಗೆ ವಯಸ್ಸಾಗಲಿ ಅಥವಾ ದೊಡ್ಡ ಪದವಿಗಳಾಗಲಿ ಅಡ್ಡಿಯಾಗುವುದಿಲ್ಲ; ಛಲ ಮತ್ತು ಕಲಿಯುವ ಹಂಬಲವಿದ್ದರೆ ಯಾವುದೂ ಅಸಾಧ್ಯವಲ್ಲ” ಎಂಬುದನ್ನು ಚನ್ನರಾಯಪಟ್ಟಣದ ಎಂ.ಕೆ. ಪ್ರಕಾಶ್ ಭಾರದ್ವಾಜ್ ಅವರು ಸಾಬೀತುಪಡಿಸಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬಂದು ಕೇವಲ ಎಂಟನೇ ತರಗತಿಯವರೆಗಿನ ವಿದ್ಯಾಭ್ಯಾಸದೊಂದಿಗೆ (7ನೇ ತರಗತಿ ತೇರ್ಗಡೆ ಹಾಗೂ 8ನೇ ತರಗತಿ ವರ್ಗಾವಣೆ ಪ್ರಮಾಣಪತ್ರ) 1992ರ ಸೆಪ್ಟೆಂಬರ್ 29ರಂದು ಕರ್ನಾಟಕ ನ್ಯಾಯಾಂಗ ಇಲಾಖೆಯಲ್ಲಿ ಸೇವೆಗೆ ಸೇರಿದ ಇವರು, ಸಕಲೇಶಪುರದ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನ್ಯಾಯಾಂಗ ಬೈಲಿಫ್ ಆಗಿ ಮೂರು ದಶಕಗಳಿಗೂ ಅಧಿಕ ಕಾಲ (33 ವರ್ಷಗಳು) ಅಂದರೆ 2025ರ ಸೆಪ್ಟೆಂಬರ್ 30ರವರೆಗೆ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ನಿವೃತ್ತಿಯ ನಂತರ ವಿಶ್ರಾಂತಿ ಪಡೆಯುವ ಬದಲು, ಬಡವರು, ಜನಸಾಮಾನ್ಯರು, ದಿನಗೂಲಿ ಕಾರ್ಮಿಕರು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಉಚಿತ ಕಾನೂನು ಅರಿವು, ಬ್ಯಾಂಕಿಂಗ್ ಸೇವೆಗಳು ಮತ್ತು ಆಡಳಿತಾತ್ಮಕ ಮಾರ್ಗದರ್ಶನ ನೀಡಲು ಚನ್ನರಾಯಪಟ್ಟಣದ ಗಾಂಧಿ ಸರ್ಕಲ್ನಲ್ಲಿ ‘ಶ್ರೀ ರಾಯರ ಸೇವಾ ಕೇಂದ್ರ’ವನ್ನು ಸ್ಥಾಪಿಸಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ಇವರು, ಗುರುಗಳ ಆಶೀರ್ವಾದದೊಂದಿಗೆ ‘ರಾಯರ ಪ್ರಸಾದಂ’ ಮೂಲಕ ಸಾಂಪ್ರದಾಯಿಕ ಸಸ್ಯಹರಿ ಊಟದ ಪಾರ್ಸೆಲ್ ಸೇವೆ ಹಾಗೂ ಮುಂಬರುವ ‘ರಾಯರ ಯಾತ್ರಾ ಸೇವೆ’ (Rayara Yatra Seve) ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇದರೊಂದಿಗೆ ಹಾಸನ ಜಿಲ್ಲೆಯ ಭಕ್ತರ ವಿಶ್ವಾಸಕ್ಕೆ ಪಾತ್ರರಾಗಿ ನೂರಾರು ಜನರಿಗೆ ಆಶ್ರಯ ಹಾಗೂ ಸೇವೆಯ ದಾರಿದೀಪವಾಗಿದ್ದಾರೆ.
ಸಮಾಜದ ಉದ್ಧಾರಕ್ಕಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆ:
ಶ್ರೀ ರಾಯರ ಸನ್ನಿಧಿಗೆ ಬರುವ ಬಡವರು, ನಿರುದ್ಯೋಗಿಗಳು, ಕಷ್ಟಪಡುವ ದಿನಗೂಲಿ ಕೆಲಸಗಾರರು ಹಾಗೂ ಬೀದಿಬದಿ ವ್ಯಾಪಾರಿಗಳು ತಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರಿಯಾಗಿ ಉಳಿತಾಯ ಮಾಡಲು ಮತ್ತು ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವುದು ಈ ಸೇವಾ ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸಮಸ್ತ ಯೋಜನೆಗಳು, ವಿವಿಧ ಸ್ಕಾಲರ್ಶಿಪ್ (ವಿದ್ಯಾರ್ಥಿವೇತನ) ಮಾಹಿತಿ ಹಾಗೂ ವೃದ್ಧಾಪ್ಯರಿಗೆ ಬೇಕಾಗುವ ಹತ್ತು ಹಲವು ಸರ್ಕಾರಿ ಸಹಾಯಗಳು ಮತ್ತು ಪಿಂಚಣಿ ಸೌಲಭ್ಯಗಳನ್ನು ಅತ್ಯಂತ ನಿಖರವಾಗಿ ತಲುಪಿಸಲು AI ತಾಂತ್ರಿಕತೆ ಅತಿ ಮುಖ್ಯವಾಗಿತ್ತು.
ಯುವ ಪೀಳಿಗೆಗೆ ಮಾದರಿಯಾಗುವಂತಹ ರೀತಿಯಲ್ಲಿ, ಈ ಆಧುನಿಕ ವಿಶ್ಲೇಷಣಾ ವಿಷಯಗಳನ್ನು ಅಳವಡಿಸಿಕೊಳ್ಳಲು ಪ್ರಕಾಶ್ ಅವರು ಮುಂದಾದರು. ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಗೂಗಲ್ (Google) ಸಂಸ್ಥೆಯು ಕೋರ್ಸೆರಾ (Coursera) ಮೂಲಕ ನೀಡುವ ‘Google AI Essentials’ ಮತ್ತು ಅದಕ್ಕೆ ಸಂಬಂಧಿಸಿದ ಒಟ್ಟು 7 ಪ್ರಮುಖ ಕೋರ್ಸ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ. ವಿಶೇಷವೆಂದರೆ, ಇಂಗ್ಲಿಷ್ ಮಾಧ್ಯಮದಲ್ಲಿದ್ದ ಈ ಕಠಿಣ ತಾಂತ್ರಿಕ ಪಾಠಗಳನ್ನು ಸತತ 14 ಗಂಟೆಗಳ ಕಾಲ ಆನ್ಲೈನ್ ಮೂಲಕ ಕುಳಿತು, ತಂತ್ರಜ್ಞಾನದ ನೆರವಿನಿಂದ ಕನ್ನಡಕ್ಕೆ ಅನುವಾದಿಸಿಕೊಂಡು, ಅರ್ಥಮಾಡಿಕೊಂಡು ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಈ ಸಾಧನೆಯ ಕುರಿತು ಎಂ.ಕೆ. ಪ್ರಕಾಶ್ ಭಾರದ್ವಾಜ್ ಅವರ ಮನದಾಳದ ಮಾತು:
“ನಾನು ಗ್ರಾಮೀಣ ಪ್ರದೇಶದಿಂದ ಬಂದು 7ನೇ ತರಗತಿ ವಿದ್ಯಾರ್ಹತೆಯೊಂದಿಗೆ ನ್ಯಾಯಾಲಯದ ಸೇವೆಗೆ ಸೇರಿದವನು. 33 ವರ್ಷಗಳ ಕಾಲ ನ್ಯಾಯಾಂಗದ ಶಿಸ್ತಿನಲ್ಲಿ ಕೆಲಸ ಮಾಡಿ, ಇಂದು ಸಮಾಜಕ್ಕೆ ಮತ್ತು ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಅವರ ಉಳಿತಾಯ ಮತ್ತು ಭವಿಷ್ಯದ ರೂಪರೇಷೆಗಾಗಿ ಸಹಾಯ ಮಾಡುತ್ತಿದ್ದೇನೆ. ರಾಯರ ಸನ್ನಿಧಿಗೆ ಬರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸೇರಿದಂತೆ ಸಮಸ್ತ ಯೋಜನೆಗಳು ತಲುಪುವಂತೆ ಹಾಗೂ ವೃದ್ಧಾಪ್ಯರಿಗೆ ಬೇಕಾದ ನೆರವು ಸಿಗುವಂತೆ ಮಾಡಲು ಈ ಎಐ (AI) ತಂತ್ರಜ್ಞಾನ ನಮಗೆ ಅತಿ ಮುಖ್ಯವಾಗಿತ್ತು. ಭಾಷೆಯ ತೊಡಕನ್ನು ಮೀರಿ 14 ಗಂಟೆಗಳ ಕಾಲ ನಿರಂತರವಾಗಿ ಕಲಿತು ಈ ಪ್ರಮಾಣಪತ್ರ ಪಡೆದಿರುವುದು ನಮ್ಮ ಸೇವಾ ಕೇಂದ್ರದ ಜನಪರ ಕೆಲಸಗಳಿಗೆ ಮತ್ತಷ್ಟು ಶಕ್ತಿ ತುಂಬಲಿದೆ.”
ಈ ಕೋರ್ಸ್ ಪೂರ್ಣಗೊಂಡಿದ್ದು, ಗೂಗಲ್ ಸಂಸ್ಥೆಯ ಅಧಿಕೃತ ಡಿಜಿಟಲ್ ಪ್ರಮಾಣಪತ್ರಗಳು ಲಭ್ಯವಾಗಿವೆ. ಇವರ ಈ ಅಸಾಧಾರಣ ಸಾಧನೆಗೆ ಸ್ಥಳೀಯ ಗಣ್ಯರು, ನ್ಯಾಯಾಂಗ ಇಲಾಖೆಯ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
– ಮಂಜುನಾಥ್ ಐ.ಕೆ.
