ತುಮಕೂರು:ನಗರದ ಸಿದ್ಧಿವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ 50ನೇ ವರ್ಷದ ಗಣಪತಿ ಪೂಜೆಯಲ್ಲಿ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರುಳೀಧರ ಹಾಲಪ್ಪ ಅವರು ಮುತೈದೆಯರಿಗೆ ಬಾಗಿನ ನೀಡಿ ಗೌರವಿಸಿದರು.
ಕಳೆದ ಐದು ವರ್ಷಗಳಿಂದ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಮುತೈದೆಯರಿಗೆ ಮಡಿಲು ಅಕ್ಕಿ ತುಂಬುವ ಕೆಲಸವನ್ನು ಮಾಡುತ್ತಿದ್ದು,ಈ ವರ್ಷವೂ ಸಹ ಹೆಸರು ನೊಂದಾಯಿಸಿದ 15ಕ್ಕೂ ಹೆಚ್ಚು ಮಹಿಳೆಯರಿಗೆ ಸಾಂಪ್ರದಾಯ ಬದ್ಧವಾಗಿ ಮಡಿಲು ತುಂಬುವ ಎಲ್ಲಾ ಪರಿಕರಗಳೊಂದಿಗೆ ಮುರುಳೀಧರ ಹಾಲಪ್ಪ ಅವರು, ಸಿದ್ಧಿವಿನಾಯಕ ಸೇವಾ ಸಮಿತಿಯ ಪದಾಧಿಕಾರಿಗಳೊಂದಿಗೆ ಸೇರಿ ಮಡಿಲು ತುಂಬುವ ಕಾರ್ಯಕ್ರಮ ನೆರವೇರಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ,ಭಾರತೀಯ ಸಂಸ್ಕೃತಿಯಲ್ಲಿ ತಾಯ್ತನ ಮತ್ತು ಮುತೈದೆ ಎರಡು ಮಹತ್ವದ ಪಾತ್ರ ವಹಿಸುತ್ತವೆ. ಇದು ಪ್ರತಿ ಹೆಣ್ಣಿನ ಕನಸು ಕೂಡ ಆಗಿದೆ.ಗಣಪತಿ ಎತ್ತರ, ತೂಕ, ವಿಜೃಂಭಣೆಗಿಂತ, ಎಷ್ಟು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ. ಜನರೊಂದಿಗೆ ಹೇಗೆ ಬೆರೆತಿದೆ ಎಂಬುದು ಮುಖ್ಯ.ಐವತ್ತು ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿಯೇ ಇಂದಿನ ಸಿದ್ಧಿವಿನಾಯಕ ಸೇವಾ ಸಮಿತಿ ಮುಂದುವರೆದಿರುವುದು ಸಂತೋಷದ ವಿಚಾರ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರೇ ಹೆಚ್ಚು ಪಾಲ್ಗೊಳ್ಳುವುದು ವಿಶೇಷ.ಎಂ.ಪಿ., ಎಂ.ಎಲ್.ಎ ಗಳ ಸಂಖ್ಯೆಯಲ್ಲಿ ಮಹಿಳೆಯರು ಕಡಿಮೆ ಇರಬಹುದು.ಆದರೆ ಮನೆಯನ್ನು ನಿಭಾಯಿಸುತ್ತಾ, ದೇಶವನ್ನು ಮುನ್ನೆಡೆಸಬಲ್ಲೆವು ಎಂಬುದನ್ನು ಅನೇಕರು ಸಾಭೀತು ಮಾಡಿ ತೋರಿಸಿದ್ದಾರೆ.ಇನ್ನೂ ಹಲವರು ಆ ದಾರಿಯಲ್ಲಿ ಮುನ್ನೆಡೆಯುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಸಮಿತಿಯವರು ಮಹಿಳಾ ಉದ್ಯಮಿಗಳಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಅವರ ಸಾಧನೆಯ ಹಾದಿಯನ್ನು ಇತರರಿಗೂ ಪರಿಚಯಿಸುವಂತೆ ಮಾಡಬೇಕೆಂದು ಮುರುಳೀಧರ ಹಾಲಪ್ಪ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ಸಿದ್ದಿವಿನಾಯಕ ಸೇವಾ ಸಮಿತಿ ಅಧ್ಯಕ್ಷರಾದ ಪ್ರಭು ಮಾತನಾಡಿ ಮಹಿಳೆಯರು,ಮಕ್ಕಳನ್ನೇ ಕೇಂದ್ರೀಕರಿಸಿದಂತೆ ಹಲವಾರು ಚಟುವಟಿಕೆಗಳನ್ನು ಪೂಜೆ ನಡೆಯುವ ಅಷ್ಟು ದಿನ ನಡೆಸಲಾಗುತ್ತದೆ.ಅದರಲ್ಲಿ ಪ್ರಮುಖವಾದುದ್ದು ಮಡಿಲು ಅಕ್ಕಿ ತುಂಬುವುದು, ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ ಹಾಗೂ ಆದರ್ಶ ಅತ್ತೆ-ಸೊಸೆ ಸ್ಪರ್ಧೆ. ಮನರಂಜನೆಯ ಜೊತೆಗೆ, ನೀತಿ ಪಾಠವೂ ಅಡಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದಿವಿನಾಯಕ ಸೇವಾ ಸಮಿತಿಯ ಕಾರ್ಯದರ್ಶಿ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷರಾದ ನಟರಾಜು,ನಿರ್ದೇಶಕರಾದ ಅನುಸೂಯಮ್ಮ, ಕೊಪ್ಪಲ್ನಾಗರಾಜು,ಸಿದ್ದರಾಜು, ಸುಮ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
