ಹಾಸನ: ಕಲೆ ಮತ್ತು ಕಲಾವಿದರ ನಡುವಿನ ಸಂಬಂಧವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಸಾಹಿತಿ, ಕವಿ, ಕಲಾವಿದ, ವಿಮರ್ಶಕ, ನಾಟಕಕಾರ ಹಾಗೂ ಪರಿಸರ ಸ್ನೇಹಿ ಗೊರೂರು ಅನಂತರಾಜು ಅವರು ತಮ್ಮ ಬರಹಗಳ ಮೂಲಕ ಹಲವು ವರ್ಷಗಳಿಂದ ಮಾಡುತ್ತಿದ್ದಾರೆ ಎಂದು ಚಿತ್ರಕಲಾವಿದ ಡಾ. ಬಾಬುರಾವ್ ನಡೋಣಿ ಅಭಿಪ್ರಾಯಪಟ್ಟರು.
ಗೊರೂರು ಅನಂತರಾಜು ಅವರ ‘ಲೋಕ ದೃಷ್ಟಿ ಕಲಾ ಸೃಷ್ಟಿ’ ಕೃತಿಯ ಕುರಿತು ಮಾತನಾಡಿದ ಅವರು, ಚಿತ್ರಕಲಾವಿದರ ಅಭಿವ್ಯಕ್ತಿ, ಭಾವನೆ, ದೃಷ್ಟಿಕೋನ, ಬದುಕು ಮತ್ತು ಕಲಾ ಸಾಧನೆಗಳನ್ನು ಪರಿಚಯಿಸುವ ಈ ಕೃತಿ ಮಹತ್ವದ್ದಾಗಿದೆ. ಹಲವು ದಶಕಗಳಿಂದ ಕಲಾವಿದರ ಕುರಿತು ಬರೆಯುತ್ತಾ, ಕಲಾವಿದ ಮತ್ತು ಜನಸಾಮಾನ್ಯರ ನಡುವಿನ ಅಂತರವನ್ನು ಕಡಿಮೆ ಮಾಡುವ ಕಾರ್ಯವನ್ನು ಅನಂತರಾಜು ಅವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಗೊರೂರು ಅನಂತರಾಜು ಅವರ ಸಾಹಿತ್ಯದಲ್ಲಿ ಮಾನವೀಯ ಸಂವೇದನೆ, ಪರಿಸರ ಕಾಳಜಿ, ಅನುಕಂಪ, ಸಹಾನುಭೂತಿ ಮತ್ತು ಸ್ನೇಹಪರತೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಅವರ ಬರಹಗಳು ಮನುಷ್ಯನ ಸಹಜ ಬದುಕು, ನೀತಿ, ಜಾನಪದ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಆಯಾಮಗಳನ್ನು ಒಳಗೊಂಡಿವೆ ಎಂದು ನಡೋಣಿ ತಿಳಿಸಿದರು.

‘ಲೋಕ ದೃಷ್ಟಿ ಕಲಾ ಸೃಷ್ಟಿ’ ಕೃತಿಯಲ್ಲಿ ಹಲವು ಚಿತ್ರಕಲಾವಿದರ ಬದುಕು, ಕಲಾ ದೃಷ್ಟಿಕೋನ, ರೇಖೆ, ವರ್ಣಶೈಲಿ ಹಾಗೂ ಅವರ ಚಿಂತನೆಗಳನ್ನು ದಾಖಲಿಸಿರುವುದು ವಿಶೇಷ. ಕಾಲದ ಪ್ರವಾಹದಲ್ಲಿ ಮರೆಯಾಗಬಹುದಾದ ಕಲಾವಿದರ ಬದುಕು ಮತ್ತು ಸಾಧನೆಗಳನ್ನು ಸಾಹಿತ್ಯದ ಮೂಲಕ ದಾಖಲಿಸುವ ಮೂಲಕ ಅನಂತರಾಜು ಅವರು ಕಲಾವಿದರಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅನಂತರಾಜು ಅವರು ಕಲೆ ಮತ್ತು ಸಾಹಿತ್ಯದ ಜೊತೆಗೆ ನಾಟಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದು, ಹಲವು ನಾಟಕಗಳು ಹಾಗೂ ಕಿರು ನಾಟಕಗಳನ್ನು ರಚಿಸಿದ್ದಾರೆ. ‘ಅಭಿನಯ ಅಭಿವ್ಯಕ್ತಿ’ ಕೃತಿಯಲ್ಲಿ 150ಕ್ಕೂ ಹೆಚ್ಚು ರಂಗಭೂಮಿ ಕಲಾವಿದರ ಪರಿಚಯ ಮಾಡಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.
ಜಾನಪದ, ಹಬ್ಬ–ಹರಿದಿನಗಳು, ನಂಬಿಕೆಗಳು, ವಿಜ್ಞಾನ, ಇತಿಹಾಸ, ಪುರಾಣ, ಧಾರ್ಮಿಕತೆ ಹಾಗೂ ಸಾಮಾಜಿಕ ವಿಚಾರಗಳನ್ನು ತಮ್ಮದೇ ಆದ ವೈಚಾರಿಕ ದೃಷ್ಟಿಕೋನದಿಂದ ಅನಂತರಾಜು ಅವರು ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು ಹಾಗೂ ವಿಚಾರವಂತರ ಬದುಕು ಮತ್ತು ಸಾಧನೆಗಳನ್ನು ತಮ್ಮ ಬರಹಗಳ ಮೂಲಕ ದಾಖಲಿಸಿರುವುದು ಶ್ಲಾಘನೀಯ ಎಂದು ಡಾ. ಬಾಬುರಾವ್ ನಡೋಣಿ ಹೇಳಿದರು.
ತಾವು ಚಿತ್ರಕಲಾವಿದರಾಗಿ ಕ್ಯಾನ್ವಾಸ್ ಮತ್ತು ಬಣ್ಣಗಳೊಂದಿಗೆ ಬದುಕು ಕಟ್ಟಿಕೊಂಡಿದ್ದು, ಬರವಣಿಗೆಯ ಕ್ಷೇತ್ರ ತಮ್ಮದಲ್ಲದಿದ್ದರೂ, ಅನಂತರಾಜು ಅವರ ಪ್ರೀತಿಯ ಒತ್ತಾಸೆಯಿಂದ ತಮ್ಮ ಅಭಿಪ್ರಾಯವನ್ನು ದಾಖಲಿಸುವ ಅವಕಾಶ ದೊರೆತಿದೆ ಎಂದು ಅವರು ತಿಳಿಸಿದರು.
