ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಸ್ಥಳೀಯ ಶ್ರೀ ಮಹಾಗಣಪತಿ ಸೇವಾ ಸಮಿತಿಯವರು ನಡೆಸುತ್ತಿರುವ ಪೌರಾಣಿಕ ನಾಟಕೋತ್ಸವ ಸ್ಪರ್ಧೆಯಲ್ಲಿ ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದ ಕಲಾವಿದರು ಡಿ.ಸಿ. ಪುಟ್ಟರಾಜು ಅವರ ನಿರ್ದೇಶನದಲ್ಲಿ ಅ.4ರಂದು ಭಾನುವಾರ ಸಂಜೆ 5 ಗಂಟೆಗೆ ‘ಕುರುಕ್ಷೇತ್ರ’ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಸಂಘದ ಅಧ್ಯಕ್ಷ ಹಾಗೂ ಕಲಾವಿದ ಡಿ.ವಿ. ನಾಗಮೋಹನ್ ಅವರು ಆಹ್ವಾನ ಪತ್ರಿಕೆಯನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಿ, ಕಾರ್ಯಕ್ರಮದ ಕುರಿತು ವರದಿ ಮಾಡುವಂತೆ ಕೋರಿದರು. ಕರಪತ್ರವನ್ನು ಗಮನಿಸಿದಾಗ ಮಂಜುನಾಥ್ ಅವರು ಅಭಿಮನ್ಯು ಪಾತ್ರ ನಿರ್ವಹಿಸುತ್ತಿರುವುದು ಕಂಡುಬಂತು. ಅವರಿಗೆ ಫೋನ್ ಮಾಡಿ ಶುಭಾಶಯ ಕೋರಿದೆ.
ಅವರು ಈ ಹಿಂದೆ ಶಕುನಿ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದನ್ನು ಗಮನಿಸಿ ಬರೆದಿದ್ದೆ. ಅದನ್ನು ಸ್ಮರಿಸಿಕೊಂಡ ಮಂಜುನಾಥ್, “ಸಾರ್, ನೀವು ಕಲಾವಿದರನ್ನು ಪ್ರೋತ್ಸಾಹಿಸಿ ಬರೆಯುತ್ತೀರಿ. ತುಂಬಾ ಸಂತೋಷವಾಗುತ್ತದೆ,” ಎಂದರು. “ನಿಮ್ಮ ನಟನೆ ಬಗ್ಗೆಯೂ ಬರೆಯಬೇಕಿದೆ. ನೀವು ನಟಿಸಿರುವ ನಾಟಕಗಳ ವಿವರಗಳನ್ನು ಕಳುಹಿಸಿ,” ಎಂದಾಗ ಅವರು ತಮ್ಮ ಕಲಾ ಪಯಣದ ವಿವರಗಳನ್ನು ಕಳುಹಿಸಿದರು.

ಬಾಲ್ಯದಲ್ಲೇ ಸಂಗೀತದ ಒಲವು
ನಮ್ಮೂರು ಹಂಗರಹಳ್ಳಿ. ಹಾಸನ–ಹೊಳೆನರಸೀಪುರ ಮುಖ್ಯ ರಸ್ತೆಯಲ್ಲಿ ಈ ಊರು ಸಿಗುತ್ತದೆ. ಇಲ್ಲಿನ ರೈಲ್ವೆ ಬ್ರಿಡ್ಜ್ ಪ್ರಮುಖ ಗುರುತಾಗಿದೆ. ಮಂಜುನಾಥ್ ಅವರ ತಂದೆ ಅಪ್ಪಸ್ವಾಮಿ ಹಾಗೂ ತಾಯಿ ಸುಶೀಲಮ್ಮ. 10-6-1980ರಂದು ಜನಿಸಿದ ಅವರು ಕುಟುಂಬದ ಮೊದಲ ಮಗ.
ಚಿಕ್ಕವಯಸ್ಸಿನಲ್ಲೇ ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡ ಮಂಜುನಾಥ್ ಅವರಿಗೆ ಕಲೆಯ ವಾತಾವರಣ ಮನೆಯಲ್ಲಿಯೇ ದೊರೆಯಿತು. ಅವರ ತಂದೆ ಅಪ್ಪಸ್ವಾಮಿ ಮಂಗಳವಾದ್ಯ ಕಲಾವಿದರಾಗಿದ್ದು, ಮೈಸೂರು ಅರಮನೆಯಲ್ಲಿ ಡೋಲ್ ವಿದ್ವಾನ್ ಆಗಿ ಸೇವೆ ಸಲ್ಲಿಸಿದ್ದರು.
ನಂತರ ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ಕುಟುಂಬ ವಾಸವಿದ್ದು, ಮಂಜುನಾಥ್ ಅವರ ಏಳನೇ ತರಗತಿವರೆಗಿನ ವಿದ್ಯಾಭ್ಯಾಸ ಅಲ್ಲಿಯೇ ನಡೆಯಿತು. ಹೈಸ್ಕೂಲ್ ಶಿಕ್ಷಣವನ್ನು ಹಂಗರಹಳ್ಳಿಯಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಹಳೇಕೋಟೆಯಲ್ಲಿ ಪೂರ್ಣಗೊಳಿಸಿದರು. ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದರು.

ಶಿಖಂಡಿ ಪಾತ್ರದಿಂದ ರಂಗಪ್ರವೇಶ
ಹೀಗಿರುವಾಗ ಹಂಗರಹಳ್ಳಿಯಲ್ಲಿ ‘ಕುರುಕ್ಷೇತ್ರ’ ನಾಟಕದ ಕಲಿಕೆ ಆರಂಭವಾಯಿತು. ಎಲ್ಲಾ ಪಾತ್ರಗಳೂ ಹಂಚಿಕೆಯಾದರೂ ಶಿಖಂಡಿ ಪಾತ್ರ ಮಾಡಲು ಯಾರೂ ಮುಂದೆ ಬರಲಿಲ್ಲ. ಆಗ ಮಂಜುನಾಥ್ ಅವರು ಆ ಪಾತ್ರ ಮಾಡಲು ಮುಂದೆ ಬಂದರು. ಅಲ್ಲಿಂದ ಅವರ ರಂಗಪಯಣ ಮುಂದುವರಿಯಿತು.
ಊರಿನಲ್ಲಿ ನಡೆದ ಹಲವು ನಾಟಕಗಳಲ್ಲಿ ‘ಚಂದ್ರಹಾಸ’, ‘ಗ್ರಹಗಳು’, ‘ಚಾರಕ’, ‘ಸೈನ್ಯಾಧಿಪತಿ’, ‘ಕಳ್ಳ’, ‘ಮಸಣದೂತರು’ ಸೇರಿದಂತೆ ಹಲವು ಪಾತ್ರಗಳನ್ನು ನಿರ್ವಹಿಸಿದರು.

ಸಂಕಷ್ಟದಲ್ಲೂ ಕಲೆಯ ಮೇಲಿನ ಪ್ರೀತಿ
ನಂತರ ಮಂಜುನಾಥ್ ಅವರಿಗೆ ವಿವಾಹವಾಯಿತು. ಕೆಲವು ಕಾರಣಗಳಿಂದ ರಂಗಭೂಮಿಯಿಂದ ದೂರವಾಗುವ ಸಂದರ್ಭವೂ ಎದುರಾಯಿತು. ಹಾಸನದಲ್ಲಿ ಖಾಸಗಿ ವಿಮಾ ಕಂಪನಿಯಿಂದ ಮೋಸಹೋಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಪರಿಣಾಮವಾಗಿ ಊರು ತೊರೆಯುವ ಪರಿಸ್ಥಿತಿ ನಿರ್ಮಾಣವಾಯಿತು.
ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮೈಸೂರಿನಲ್ಲಿ ಕಷ್ಟದ ದಿನಗಳನ್ನು ಕಳೆದರು. ಆದರೆ ಮನಸ್ಸಿನೊಳಗೆ ಹುದುಗಿದ್ದ ರಂಗಕಲೆಯ ಮೇಲಿನ ಪ್ರೀತಿ ಅಲ್ಲಿಯೂ ಅವರನ್ನು ಬಿಡಲಿಲ್ಲ. ಮೈಸೂರಿನ ಟೌನ್ ಹಾಲ್ನಲ್ಲಿ ನಡೆಯುತ್ತಿದ್ದ ನಾಟಕಗಳನ್ನು ವೀಕ್ಷಿಸುವ ಮೂಲಕ ಕಲೆಯೊಂದಿಗಿನ ನಂಟನ್ನು ಜೀವಂತವಾಗಿರಿಸಿಕೊಂಡರು. ಅಲ್ಲಿಯೂ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ ಕಲಾಸಕ್ತಿಯನ್ನು ಮುಂದುವರಿಸಿದರು.

ಮತ್ತೆ ರಂಗಭೂಮಿಗೆ
2018ರಲ್ಲಿ ಮಂಜುನಾಥ್ ಅವರು ಊರಿಗೆ ಮರಳಿದರು. ಊರಿನ ಪ್ರಮುಖರಾದ ಎಚ್.ವಿ. ವಾಸಣ್ಣ ಹಾಗೂ ಸ್ನೇಹಿತರು ಅವರಿಗೆ ಸಹಕಾರ ನೀಡಿದರು. ಮತ್ತೆ ಊರಿನಲ್ಲಿ ‘ಕುರುಕ್ಷೇತ್ರ’ ನಾಟಕದ ರಂಗತಾಲೀಮು ಆರಂಭವಾಯಿತು.
ಈ ಬಾರಿ ಅವರಿಗೆ ಶಕುನಿಯ ಪಾತ್ರ ದೊರೆಯಿತು. ಗಡ್ಡ ನೀವಿ, ಹಸ್ತಗಳನ್ನು ತೀಡಿ, ಅದ್ಭುತ ಸಂಭಾಷಣೆಗಳನ್ನು ಹೇಳುವ ಮೂಲಕ ಸುತ್ತಮುತ್ತಲಿನ ಊರುಗಳಲ್ಲಿ ಶಕುನಿ ಪಾತ್ರದ ಮೂಲಕ ಧಿಡೀರ್ ಪ್ರಸಿದ್ಧರಾದರು. ಇಲ್ಲಿಂದ ಅವರ ನಟನೆ ಮತ್ತೆ ಹೊಸ ರೂಪದಲ್ಲಿ ಆರಂಭವಾಯಿತು.

ಅನ್ನಪೂರ್ಣೇಶ್ವರಿ ಕಲಾಸಂಘದೊಂದಿಗೆ ನಂಟು
ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದವರು ‘ತ್ರಿಜನ್ಮ ಮೋಕ್ಷ’ ನಾಟಕದ ಅಭ್ಯಾಸ ನಡೆಸುತ್ತಿದ್ದಾಗ ಅದನ್ನು ವೀಕ್ಷಿಸಲು ಮಂಜುನಾಥ್ ತೆರಳಿದ್ದರು. ಈ ವೇಳೆ ವಕೀಲ ತಿಮ್ಮೇಗೌಡರು ಅವರನ್ನು ನಾಟಕಕ್ಕೆ ಸೇರಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಸಂಘದ ಅಧ್ಯಕ್ಷ ಡಿ.ವಿ. ನಾಗಮೋಹನ್ ಅವರು ಅವಕಾಶ ನೀಡಿದರು.
ನಿರ್ದೇಶಕರಾದ ಎಂ.ಪಿ. ಪದ್ಮರಾಜ್ ಮಲ್ಲಿತಮ್ಮನಹಳ್ಳಿ, ಹೆರಗು ಕರಿಯಪ್ಪ, ರವಿಕುಮಾರ್, ಬೆಳ್ಳೂರು ಕ್ರಾಸ್ನ ಡಿ.ಸಿ. ಪುಟ್ಟರಾಜು, ಮಂಜುನಾಥ್ ಕಿಕ್ಕೇರಿ, ಸೀಗೆನಾಡು ಪಾಲಾಕ್ಷಾಚಾರ್, ನಾಗರಾಜಾಚಾರ್, ಕೇಶವಮೂರ್ತಿ ಹಾಗೂ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
‘ಶಿಖಂಡಿ’, ‘ಚಂದ್ರಹಾಸ’, ‘ಚಾರಕ’, ‘ಶನಿಪ್ರಭಾವ’ದ ಗ್ರಹಗಳು, ‘ಮಸಣದೂತರು’, ‘ಮಂತ್ರ’, ‘ನಟಿ’, ‘ಶಕುನಿ’, ‘ವಿಧುರ’, ‘ಅಭಿಮನ್ಯು’, ‘ವಸುಂಧರ’, ‘ಕಳ್ಳ’, ‘ವಿಜಯ’, ‘ಜಟಾಯು’, ‘ದುಶ್ಯಾಸನ’, ‘ಲಕ್ಷ್ಮಣ’, ‘ದ್ರೋಣ’, ‘ಸೂತ್ರಧಾರಿ’, ‘ಗುರು’, ‘ಅರ್ಜುನ’, ‘ನಾರದ’ ಸೇರಿದಂತೆ ಹಲವು ಬಗೆಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಲವಾರು ವೇದಿಕೆಗಳಲ್ಲಿ ರಂಗಗೀತೆ, ಜನಪದ ಗೀತೆ, ಭಕ್ತಿಗೀತೆ ಹಾಗೂ ಚಿತ್ರಗೀತೆಗಳನ್ನು ಹಾಡಿರುವುದಾಗಿಯೂ ಮಂಜುನಾಥ್ ತಿಳಿಸಿದ್ದಾರೆ.
ಪ್ರಶಸ್ತಿಗಳ ಗೌರವ
ಮಂಜುನಾಥ್ ಅವರ ಕಲಾ ಸೇವೆಯನ್ನು ಗುರುತಿಸಿ ಮೈಸೂರಿನಲ್ಲಿ ಕನ್ನಡ ಫಿಲಂ ಚೇಂಬರ್ ವತಿಯಿಂದ ‘ರಂಗಭೂಮಿ ಕಲಾರತ್ನ’ ಪ್ರಶಸ್ತಿ ಹಾಗೂ ಶಿವಮೊಗ್ಗದಲ್ಲಿ ‘ಕನಕಶ್ರೀ ಚೇತನ ಪತಂಜಲಿ ರತ್ನ’ ಪ್ರಶಸ್ತಿ ಲಭಿಸಿದೆ.
ಹಂಗರಹಳ್ಳಿಯಿಂದ ಆರಂಭವಾದ ಮಂಜುನಾಥ್ ಅವರ ಕಲಾಪಯಣ ಇಂದು ಹಾಸನ, ಸಾಲಗಾಮೆ, ಮೈಸೂರು, ಕೆ.ಆರ್. ನಗರ, ಹೊಳೆನರಸೀಪುರ, ಗೊರೂರು, ಚನ್ನರಾಯಪಟ್ಟಣ, ನಾರಿಹಳ್ಳಿ ಸೇರಿದಂತೆ ಹಲವು ಪ್ರದೇಶಗಳವರೆಗೆ ವಿಸ್ತರಿಸಿದೆ.
ಶಿಖಂಡಿ ಪಾತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟು, ಶಕುನಿಯಾಗಿ ಜನಮನ ಗೆದ್ದು, ಇದೀಗ ಅಭಿಮನ್ಯುವಿನ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಮಂಜುನಾಥ್ ಹಂಗರಹಳ್ಳಿ ಅವರ ಕಲಾಪಯಣ ನಿಜಕ್ಕೂ ಗ್ರಾಮೀಣ ಪ್ರತಿಭೆಯೊಂದರ ನಿರಂತರ ಸಾಧನೆಯ ಕಥೆಯಾಗಿದೆ.

– ಗೊರೂರು ಅನಂತರಾಜು, ಹಾಸನ
ಮೊ.: 9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3ನೇ ಕ್ರಾಸ್, ಹಾಸನ–573201.
