ಕೆ.ಆರ್.ಪೇಟೆ,ಅ.02: ಮೈಸೂರು ಮಲ್ಲಿಗೆಯ ಕಂಪಿನ ಮೂಲಕ ವಿಶ್ವ ಮಟ್ಟದಲ್ಲಿ ತಮ್ಮ ಸಾಹಿತ್ಯದ ಕೀರ್ತಿಯನ್ನು ಬೆಳಗಿ, ದಾಂಪತ್ಯದ ನೋವು-ನಲಿವುಗಳ ಬಗ್ಗೆ ಕವನಗಳನ್ನು ರಚಿಸಿ ಪ್ರಖ್ಯಾತರಾದ ಕಿಕ್ಕೇರಿಯ ವರಪುತ್ರ ಕೆ.ಎಸ್. ನರಸಿಂಹಸ್ವಾಮಿ ಅವರ ಹೆಸರನ್ನು ಗ್ರಾಮದ ದೊಡ್ಡ ಕೆರೆಗೆ ನಾಮಕರಣ ಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಕನ್ನಡದ ಶೇಕ್ಸ್ಪಿಯರ್ ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರು ಈ ಭೂಮಿ ಇರುವತನಕವೂ ಶಾಶ್ವತವಾಗಿರುತ್ತದೆ ಎಂದು ರಾಜ್ಯದ ಭಾರಿ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಹೇಳಿದರು.
ಅವರು ಇಂದು ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದ ಅಮಾನಿ ಕೆರೆಗೆ “ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಸರೋವರ” ಎಂದು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣ ಮಾಡಿ ಕವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
“ಹಣ ಆಸ್ತಿಯನ್ನು ಯಾರು ಬೇಕಾದರೂ ಸಂಪಾದನೆ ಮಾಡಬಹುದು. ಆದರೆ ಗ್ರಾಮದಲ್ಲಿ ಜನಿಸಿದ ಒಬ್ಬ ಸಾಮಾನ್ಯ ವ್ಯಕ್ತಿಯು ಸಾಹಿತ್ಯ ಕೃಷಿ ನಡೆಸಿ ದಾಂಪತ್ಯದ ಒಳ ಹೂರಣಗಳನ್ನೇ ಕವಿತೆಗಳನ್ನಾಗಿ ರಚನೆ ಮಾಡಿ ವಿಶ್ವವೇ ಮೆಚ್ಚುವಂತೆ ಸೈ ಎನಿಸಿಕೊಂಡ ಮಹಾನ್ ಚೇತನ ನಮ್ಮ ಕಿಕ್ಕೇರಿಯ ಸುಪುತ್ರ ಕೆ.ಎಸ್. ನರಸಿಂಹಸ್ವಾಮಿ. ಅವರು ಕವಿತೆಗಳನ್ನು ರಚಿಸಲು ಪ್ರೇರಕ ಶಕ್ತಿಯಾಗಿದ್ದ ಈ ಅಮಾನಿ ಕೆರೆಯ ಆವರಣವನ್ನು ಅಭಿವೃದ್ಧಿಪಡಿಸಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಅವರ ಹೆಸರನ್ನು ಇಡಲಾಗಿದೆ. ಇದು ಭಕ್ತಿ ನಮನದ ಕಾರ್ಯಕ್ರಮವಾಗಿದೆ. ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರು ಈ ಭೂಮಿ ಇರುವವರೆವಿಗೂ ಶಾಶ್ವತವಾಗಿರುತ್ತದೆ. ಅಂತಹ ಮೇರು ಸಾಹಿತಿಯಾಗಿರುವ ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಕನ್ನಡದ ಶೇಕ್ಸ್ ಫಿಯರ್ ಇದ್ದಂತೆ ಎಂದರು.

“ನಾನು ನೀರಾವರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗ, ದಾವಣಗೆರೆ ಕೆಲವು ಭಾಗಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎತ್ತಿನಹೊಳೆ ಯೋಜನೆ ಹಾಗೂ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸುವುದು ನನ್ನ ಮುಂದಿರುವ ಮಹತ್ತರ ಕಾರ್ಯ. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗ, ದಾವಣಗೆರೆ ಜನರಿಗೆ ನೀರು ಕೊಡುತ್ತೇವೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ಮತ್ತು ಕಾವೇರಿ ವಿವಾದಕ್ಕೆ ಪರಿಹಾರವಾಗಿ ಮೇಕೆದಾಟು ಯೋಜನೆ ಅಗತ್ಯ. ಸಾವಿರಾರು ಕೋಟಿ ಬೇಕಿರುವ ಈ ಯೋಜನೆಗಳಿಗೆ ಮಂಡ್ಯ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಿಕ್ಕೇರಿ ಸುರೇಶ್ಗೆ ಉನ್ನತ ಸ್ಥಾನಮಾನ:
“ಕೆ.ಆರ್.ಪೇಟೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ಅವರಿಗೆ ರಾಜಕಾರಣದಲ್ಲಿ ಉಜ್ವಲ ಭವಿಷ್ಯವಿದೆ. ಅವನನ್ನು ನನ್ನ ಸಹೋದರನ ರೀತಿ ನೋಡುತ್ತಿದ್ದೇನೆ. ಸುರೇಶ್ ಅವರಿಗೆ 20ವರ್ಷಗಳ ಹಿಂದೆ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಸ್ಥಾನ ಬಿಟ್ಟರೆ ಈಚೆಗೆ ಯಾವುದೇ ಅಧಿಕಾರ ಸಿಕ್ಕಿಲ್ಲ. ಇವರಿಗೆ ಶಾಸಕರಾಗುವ ಎಲ್ಲಾ ಅರ್ಹತೆಗಳಿಗೆ ಆದರೆ ಅಧಿಕಾರ ಸಿಗಲು ಅದೃಷ್ಟವೂ ಬೇಕು. ಸುರೇಶ್ ಅವರಿಗೆ ನಿಗಮ ಮಂಡಳಿಯಲ್ಲಿ ಅಧಿಕಾರ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಆದಷ್ಟು ಬೇಗ ನಿಮ್ಮ ನಿರೀಕ್ಷೆಗೆ ತಕ್ಕಂತೆ ಸ್ಥಾನಮಾನ ಸುರೇಶ್ ಅವರಿಗೆ ಸಿಗಲಿದೆ ಎಂದು ಚೆಲುವರಾಯಸ್ವಾಮಿ ಭರವಸೆ ನೀಡಿದರು.
ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಸಂಗೀತ ನಿರ್ದೇಶಕ ಶ್ರೀನಿವಾಸಉಡಪ, ಕಿಕ್ಕೇರಿ ಬಲರಾಮು, ಮಾದಾಪುರ ಸುಬ್ಬಣ್ಣ ಹಾಗೂ ಟ್ರಸ್ಟ್ ಪದಾಧಿಕಾರಿಗಳನ್ನು ಕಿಕ್ಕೇರಿ ಸುರೇಶ್ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅಮಾನಿಕೆರೆಗೆ ಕೆ.ಎಸ್.ನರಸಿಂಹಸ್ವಾಮಿ ಸರೋವರ ನಾಮಕರಣ ಸಂಭ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು ಭಾಗವಹಿಸಿದ್ದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕಿಕ್ಕೇರಿ ಹೋಬಳಿಯ ಹಲವು ನೀರಾವರಿ ಯೋಜನೆಗಳಿಗೆ ಅನುಧಾನ ನೀಡಬೇಕು. ಕಿಕ್ಕೇರಿ ಪಟ್ಟಣವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಬೇಕು. ಪಾಂಡವಪುರ- ಚನ್ನರಾಯಪಟ್ಟಣ ಮುಖ್ಯ ರಸ್ತೆಯನ್ನು ತುರ್ತಾಗಿ ಚತುಸ್ಪದ ರಸ್ತೆಯನ್ನಾಗಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ರಾಂತ ನಿರ್ದೇಶಕ ಮುದ್ದುಕೃಷ್ಣ, ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮಾಜಿ ಶಾಸಕ ಬಿ.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಸ್ಟಾರ್ ಚಂದ್ರು, ಬಿ.ಎಲ್.ದೇವರಾಜು, ಜಿ.ಪಂ.ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ಎಲ್.ದೇವರಾಜು, ಆರ್.ಟಿ.ಓ.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಕೊಪ್ಪ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಅಂಬರೀಶ್, ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎ.ಆರ್.ರಾಜಾನಾಯಕ್, ಉಪಾಧ್ಯಕ್ಷ ಲಕ್ಷ್ಮೀ ಪುರ ಚಂದ್ರೇಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಹೇಂದ್ರ, ಹೊಸಹೊಳಲು ಪ್ರವೀಣ್, ಮುಖಂಡರಾದ ಜಾನೇಗೌಡ, ಸಾಸಲು ಈರಪ್ಪ, ಡಿ.ಪ್ರೇಮಕುಮಾರ್, ಟಿ.ಎನ್.ದಿವಾಕರ್, ಚಂದ್ರಮೋಹನ್, ಗ್ಯಾಸ್ ರಾಜಶೇಖರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಸಿ.ಮೀನಾಕ್ಷಿ ರಮೇಶ್ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.

ಇದೇ ವೇಳೆ ಸೊಳ್ಳೆಪುರ ಪುಟ್ಟೇಗೌಡ, ಲಕ್ಷ್ಮಿಪುರ ನಂಜಪ್ಪ, ಕಿಕ್ಕೇರಿ ಶಿವರಾಮಯ್ಯ, ಕೆ.ಎನ್.ನಾಗರಾಜು, ಯೂಸುಫ್ಖಾನ್, ಚನ್ನೇಗೌಡ, ಗೌಡೇನಹಳ್ಳಿ ವಿಜಯಕುಮಾರಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಕಿಕ್ಕೇರಿ ಸುರೇಶ್ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರದ ಭಾರಿ ನೀರಾವರಿ ಸಚಿವರಾಗಿ ಇದೇ ಮೊದಲ ಬಾರಿಗೆ ಕಿಕ್ಕೇರಿ ನಗರಕ್ಕೆ ಆಗಮಿಸಿದ ಎನ್. ಚಲುವರಾಯಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಗೂಳಿಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಕೊಪ್ಪ ಅವರನ್ನು ಜಾನಪದ ಕಲಾ ತಂಡಗಳ ಅದ್ದೂರಿ ಮೆರವಣಿಗೆಯೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಅಭಿನಂದನಾ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
– ಶ್ರೀನಿವಾಸ್ ಆರ್.
