ಬೆಂಗಳೂರು: ಜಗತ್ತಿನಲ್ಲಿ ನಡೆಯುತ್ತಿರುವ ಬಲಿಷ್ಠ ರಾಷ್ಟ್ರಗಳ ಯುದ್ಧ ದಾಹಕ್ಕೆ ಮಹಾತ್ಮ ಗಾಂಧೀಜಿಯವರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಅಳವಡಿಸಿಕೊಳ್ಳುವುದೇ ಪರಿಹಾರ ಎಂದು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಚಿಂತಕ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನದ ಕೋಶಾಧ್ಯಕ್ಷ ಡಾ. ಎಸ್. ರಾಮಲಿಂಗೇಶ್ವರ್ (ಸಿಸಿರಾ) ಅಭಿಪ್ರಾಯಪಟ್ಟರು.
ಹಾರೋಹಳ್ಳಿ ಹೊರವಲಯದ ವಡೇರಹಳ್ಳಿ ಸುವರ್ಣಮುಖಿ ಸಂಸ್ಕೃತಿ ಧಾಮ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನ ಬಲಿಷ್ಠ ರಾಷ್ಟ್ರಗಳು ಸಣ್ಣಪುಟ್ಟ ದೇಶಗಳ ಸಂಪತ್ತನ್ನು ಲೂಟಿ ಮಾಡುವುದರ ಜತೆಗೆ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವ್ಯವಸ್ಥೆಗಳಲ್ಲಿ ಅರಾಜಕತೆ ಸೃಷ್ಟಿಸುತ್ತಿವೆ. ಅಮೆರಿಕ, ಚೀನಾ, ರಷ್ಯಾದಂತಹ ರಾಷ್ಟ್ರಗಳು ಮನುಷ್ಯರ ನಡುವಿನ ಸಂಘರ್ಷಗಳಿಗೆ ಮದ್ದು, ಗುಂಡು ಮತ್ತು ಬಂದೂಕುಗಳನ್ನೇ ಅಂತಿಮ ಅಸ್ತ್ರವಾಗಿ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಕಳೆದ ಎರಡು-ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಹಾಗೂ ಇರಾನ್–ಇಸ್ರೇಲ್ ನಡುವಿನ ಯುದ್ಧಗಳು ಭೂಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಭಾರತವು ಗಾಂಧೀಜಿಯವರ ಆದರ್ಶ, ಚಿಂತನೆ, ಶಾಂತಿ, ಸಹನೆ, ಸಹಬಾಳ್ವೆ, ಪ್ರೀತಿ ಮತ್ತು ಮಾನವೀಯತೆಯ ಸಂದೇಶವನ್ನು ವಿಶ್ವಕ್ಕೆ ಸಾರುವ ಮೂಲಕ ಶಾಂತಿ ಸ್ಥಾಪನೆಗೆ ಮುಂದಾಗಬೇಕಿದೆ ಎಂದು ಹೇಳಿದರು.
ಮಕ್ಕಳಿಗೆ ಸತ್ಯ, ಪ್ರಾಮಾಣಿಕತೆ, ಅಹಿಂಸೆ, ಸರಳತೆ ಹಾಗೂ ಸತ್ಯಾಗ್ರಹದ ಮಹತ್ವವನ್ನು ಬಾಲ್ಯದಿಂದಲೇ ತಿಳಿಸಬೇಕು. ಸಮಾಜದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ದಿನೇದಿನೇ ಹೆಚ್ಚುತ್ತಿದೆ. ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳ ಪಾತ್ರವೂ ಸಾಮಾಜಿಕ ಅಸಮಾನತೆಯ ಚರ್ಚೆಯಲ್ಲಿ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ಪ್ರಗತಿಯ ಹಾದಿಯಲ್ಲಿ ಎಲ್ಲರೂ ಸಮಾನವಾಗಿ ಹೆಜ್ಜೆ ಹಾಕಬೇಕಾದರೆ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸೇವೆಗಳು ಶ್ರೀಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತಾಗಬೇಕು. ಆಗ ಮಾತ್ರ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಮಯ ಜೀವನವನ್ನು ಸ್ಮರಿಸುವುದು ಸಾರ್ಥಕವಾಗುತ್ತದೆ ಎಂದು ಡಾ. ಸಿಸಿರಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆಚಾರ್ಯ ಡಾ. ಎಂ. ನಾಗರಾಜು ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಶಿವರಾಜು, ಮುಖ್ಯೋಪಾಧ್ಯಾಯ ಚಂದ್ರಶೇಖರ್ ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಗಾಂಧೀಜಿಯವರಿಗೆ ಇಷ್ಟವಾದ ಭಜನೆಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು
