ಶ್ಲೋಕ – 16
ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ ।
ಭಾವಸಂಶುದ್ಧಿರಿತ್ಯೇತತ್ ತಪೋ ಮಾನಸಮುಚ್ಯತೇ ॥೧೬॥
ಮನಃ ಪ್ರಸಾದಃ ಸೌಮ್ಯತ್ವಂ ಮೌನಮ್ ಆತ್ಮವಿನಿಗ್ರಹಃ ।
ಭಾವಸಂಶುದ್ಧಿಃ ಇತಿ ಏತತ್ ತಪಃ ಮಾನಸಮ್ ಉಚ್ಯತೇ — ಬಗೆಯ ತಿಳಿ, ಮಿದುತನ, ಮನನ, ತನ್ನ ಮೇಲೆ ಹಿಡಿತ ಮತ್ತು ಒಳ್ಳೆಯದನ್ನೆ ಬಗೆಯುವುದು-ಇದು ಮನದ ತಪಸ್ಸು ಎನಿಸುತ್ತದೆ.
ಮೇಲೆ ಹೇಳಿದ ಎರಡು ವಿಧದ ತಪಸ್ಸಿಗೆ ಮಿಗಿಲಾಗಿರುವ ಮಹಾ ತಪಸ್ಸು ಎಂದರೆ ಮನದ ತಪಸ್ಸು. ಶರೀರ ಮತ್ತು ಮಾತಿನ ತಪಸ್ಸು ಮನದ ತಪಸ್ಸಿಗೆ ಪೂರಕ. ನಮ್ಮ ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಅದರಲ್ಲಿ ಕೆಟ್ಟ ವಿಚಾರ ತುಂಬಿ ಕಲುಷಿತವಾಗಿರಬಾರದು. ಅದು ಸೌಮ್ಯವಾಗಿರಬೇಕು, ಅಲ್ಲಿ ಕ್ರೌರ್ಯವಿರಬಾರದು. ಯಾವುದೇ ಒಂದು ವಿಷಯದ ಮೇಲೆ ತೀರ್ಮಾನಕ್ಕೆ ಬರುವ ಮೊದಲು ಆಳವಾದ ಚಿಂತನೆ ಮಾಡಬೇಕು. ಒಂದು ವಿಷಯದ ಮೇಲೆ, ಒಬ್ಬ ವ್ಯಕ್ತಿಯ ಮೇಲೆ ದುಡುಕಿ ಪ್ರತಿಕ್ರಿಯಿಸಬಾರದು. ಮನನ ಮಾಡು, ಮನನ ಮಾಡಿ ಮಾತನಾಡು. ಈ ರೀತಿ ಮನನ ಮಾಡಬೇಕಾದರೆ ನಾವು ಆತ್ಮವಿನಿಗ್ರಹವನ್ನು ಸಾಧಿಸಬೇಕು( ಹೆಚ್ಚಿನ ವಿವರಕ್ಕಾಗಿ ಅ-೧೩, ಶ್ಲೋ-೭-ನೋಡಿ). ಸ್ವಚ್ಛವಾದ ಕ್ರೌರ್ಯವಿಲ್ಲದ ಮನಸ್ಸಿಗೆ ಇಂದ್ರಿಯಗಳ ಹಿಡಿತವಿರುತ್ತದೆ. ಅಂತಹ ಮನಸ್ಸಿಗೆ ಕೆಟ್ಟ ಭಾವನೆ ಹೊಳೆಯುವುದಿಲ್ಲ. ಒಬ್ಬರು ನಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರೂ ಕೂಡ ನಮಗೆ ಅವರ ಮೇಲೆ ದ್ವೇಷ, ಕೋಪ ಬರುವುದಿಲ್ಲ. ಈ ರೀತಿ ಮನಸ್ಸಿನ ನಿಯಂತ್ರಣ ಮಾಡುವುದೇ ಮನಸ್ಸಿನ ತಪಸ್ಸು.
ಇಲ್ಲಿ ಹೇಳಿದ ಮೂರು ವಿಧದ ತಪಸ್ಸಿನಲ್ಲಿ ಮತ್ತೆ ಪ್ರತಿಯೊಂದರಲ್ಲೂ ಮೂರು ವಿಧ. ಸಾತ್ವಿಕ, ರಾಜಸ ಮತ್ತು ತಾಮಸ. ಇದರ ವಿವರಣೆ ಮುಂದಿನ ಮೂರು ಶ್ಲೋಕದಲ್ಲಿದೆ.
