ಚನ್ನರಾಯಪಟ್ಟಣ: ಪತ್ನಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಟರಾಜನಾಯ್ಕ ಎಂಬ ಆರೋಪಿಗೆ ಚನ್ನರಾಯಪಟ್ಟಣದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗೀಹಳ್ಳಿ ಗ್ರಾಮದಲ್ಲಿ 2024ರ ಜುಲೈ 24ರಂದು ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿತ್ತು. ಆರೋಪಿ ನಟರಾಜನಾಯ್ಕ ತನ್ನ ಪತ್ನಿ ಕೆಂಪದೇವಮ್ಮ ಅವರನ್ನು ಕಳೆ ಕೀಳುವ ನೆಪದಲ್ಲಿ ತೋಟಕ್ಕೆ ಕರೆದುಕೊಂಡು ಹೋಗಿ, ಆಕೆಯೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿತ್ತು.
ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಕುತ್ತಿಗೆಗೆ ಸುತ್ತಿದ ಹಗ್ಗದಿಂದ ಸುಮಾರು 60 ಅಡಿ ದೂರದಲ್ಲಿದ್ದ ಜೋಳದ ಹೊಲಕ್ಕೆ ಎಳೆದುಕೊಂಡು ಹೋಗಿ ಬಿಸಾಡಿದ್ದಾನೆ. ಅಲ್ಲದೆ, ಕೆಂಪದೇವಮ್ಮ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರ, ಒಂದು ಜೊತೆ ಚಿನ್ನದ ಓಲೆ ಹಾಗೂ ಎರಡು ಚಿನ್ನದ ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ತನಿಖೆಯಲ್ಲಿ ದೃಢಪಟ್ಟಿತ್ತು.
ಈ ಕುರಿತು ತನಿಖೆ ನಡೆಸಿದ ಸಂತೋಷ್ ಎಸ್. ಅವರು ಬಿ.ಎನ್.ಎಸ್. ಕಲಂ 103(1), 238 ಹಾಗೂ 303(1)ರಡಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಚನ್ನರಾಯಪಟ್ಟಣದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಎಂ.ಎಸ್. ಅವರು ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ.
ಬಿ.ಎನ್.ಎಸ್. ಕಲಂ 103(1)ರಡಿ ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ₹30,000 ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಕಾರಾವಾಸ ವಿಧಿಸಲಾಗಿದೆ. ಕಲಂ 238(ಎ)ರಡಿ 3 ವರ್ಷ ಸಾದಾ ಕಾರಾವಾಸ ಹಾಗೂ ₹5,000 ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಕಾರಾವಾಸ ಮತ್ತು ಕಲಂ 303(2)ರಡಿ 1 ವರ್ಷ ಸಾದಾ ಕಾರಾವಾಸ ಹಾಗೂ ₹2,000 ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ.
ಒಟ್ಟು ₹37,000 ದಂಡದ ಪೈಕಿ ₹5,000 ಸರ್ಕಾರಕ್ಕೆ ಜಮಾ ಮಾಡಬೇಕು. ಉಳಿದ ₹32,000 ಮೊತ್ತವನ್ನು ಅಪ್ರಾಪ್ತ ಮಕ್ಕಳ ಪರವಾಗಿ ಮೈನರ್ ಗಾರ್ಡಿಯನ್ ಸಿದ್ದಾನಾಯಕ್ ಅವರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸಿ.ಡಿ. ಶ್ರೀನಿವಾಸ ಅವರು ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿದರು. ಕೋರ್ಟ್ ಪಿ.ಸಿ. ಗಿರೀಶ್ ಅವರು ಸಾಕ್ಷಿದಾರರು ಹಾಗೂ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವಲ್ಲಿ ಸಹಕರಿಸಿದರು.
– ಮಂಜುನಾಥ್ ಐ.ಕೆ.
