ಕೊರಟಗೆರೆ: ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರದ ಪಡಿತರವನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕರು, ಕಮಿಷನ್ ಹಣದ ವಿಳಂಬದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್) ಪ್ರತಿತಿಂಗಳು ಪಡಿತರ ವಿತರಿಸುತ್ತಿದ್ದರೂ, ಅಂಗಡಿ ಮಾಲೀಕರಿಗೆ ನೀಡಬೇಕಾದ ಕಮಿಷನ್ ಮೊತ್ತ ನಿಯಮಿತವಾಗಿ ಪಾವತಿಯಾಗುತ್ತಿಲ್ಲ. ನಾಲ್ಕಾರು ತಿಂಗಳಿನಿಂದ ಕಮಿಷನ್ ಬಾಕಿ ಉಳಿದಿದ್ದು, ಕೆಲವೊಮ್ಮೆ ನಾಲ್ಕರಿಂದ ಆರು ತಿಂಗಳಿಗೊಮ್ಮೆ ಪಾವತಿಯಾಗುತ್ತಿರುವುದರಿಂದ ಅಂಗಡಿಗಳ ದೈನಂದಿನ ನಿರ್ವಹಣೆ ದುಸ್ತರವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ನ್ಯಾಯಬೆಲೆ ಅಂಗಡಿಗಳಿಗೆ ಬರುವ ಕಮಿಷನ್ ಮೊತ್ತವೇ ಕೆಲ ಮಾಲೀಕರ ಕುಟುಂಬದ ಪ್ರಮುಖ ಆದಾಯವಾಗಿದ್ದು, ಸಕಾಲದಲ್ಲಿ ಹಣ ಪಾವತಿಯಾಗದಿರುವುದು ಜೀವನ ನಿರ್ವಹಣೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಇಂಟರ್ನೆಟ್ ಶುಲ್ಕ, ಪಡಿತರ ಧಾನ್ಯ ತೂಕ ಮಾಡುವ ಕಾರ್ಮಿಕರ ಕೂಲಿ ಸೇರಿದಂತೆ ವಿವಿಧ ವೆಚ್ಚಗಳನ್ನು ಮಾಲೀಕರೇ ಭರಿಸಬೇಕಾಗಿದೆ. ಕಮಿಷನ್ ಬಾರದ ಸಂದರ್ಭದಲ್ಲಿ ಈ ವೆಚ್ಚಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ.
ಅಧಿಕಾರಿಗಳ ಸಹಿಗಾಗಿ ತಿಂಗಳುಗಟ್ಟಲೆ ಕಾಯುವ ಸ್ಥಿತಿ
ಕಮಿಷನ್ ಪಾವತಿಗೆ ಸಂಬಂಧಿಸಿದ ಕಡತಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಿಗಾಗಿ ತಿಂಗಳುಗಟ್ಟಲೆ ಮೇಜಿನ ಮೇಲೆ ಉಳಿಯುತ್ತವೆ. ಇದರಿಂದ ಪಾವತಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ರಾಜ್ಯ ಸರ್ಕಾರದ ಪಾಲಿನ ಕಮಿಷನ್ ಎಷ್ಟು, ಕೇಂದ್ರ ಸರ್ಕಾರದ ಪಾಲಿನ ಕಮಿಷನ್ ಎಷ್ಟು ಎಂಬುದರ ಕುರಿತು ಸ್ಪಷ್ಟ ಮಾಹಿತಿ ದೊರೆಯದೆ ಮಾಲೀಕರು ಗೊಂದಲಕ್ಕೆ ಒಳಗಾಗಿದ್ದಾರೆ.
ಕಮಿಷನ್ ಮೊತ್ತವನ್ನು ಮಧ್ಯವರ್ತಿತನ ಹಾಗೂ ಅನಗತ್ಯ ವಿಳಂಬವಿಲ್ಲದೆ ನೇರವಾಗಿ ನ್ಯಾಯಬೆಲೆ ಅಂಗಡಿ ಮಾಲೀಕರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದು ಮಾಲೀಕರ ಪ್ರಮುಖ ಬೇಡಿಕೆಯಾಗಿದೆ.
*ಸರ್ವರ್ ಸಮಸ್ಯೆ;ನಿರ್ವಹಣಾ ವೆಚ್ಚವೂ ಮಾಲೀಕರ ಹೆಗಲಿಗೆ*
ಪಡಿತರ ವಿತರಣೆ ಸಂದರ್ಭದಲ್ಲಿ ಪದೇಪದೇ ಎದುರಾಗುವ ಸರ್ವರ್ ಹಾಗೂ ಇ-ಕಮ್ಯುನಿಕೇಶನ್ ಸಮಸ್ಯೆಗಳು ಮತ್ತೊಂದು ತಲೆನೋವಾಗಿ ಪರಿಣಮಿಸಿವೆ. ಬಯೋಮೆಟ್ರಿಕ್ ಮೂಲಕ ಫಲಾನುಭವಿಗಳ ದೃಢೀಕರಣಕ್ಕೆ ತೊಂದರೆಯಾಗುವುದರಿಂದ ಗ್ರಾಹಕರು ಮತ್ತು ಅಂಗಡಿ ಮಾಲೀಕರ ನಡುವೆ ಕೆಲವೊಮ್ಮೆ ವಾಗ್ವಾದಕ್ಕೂ ಕಾರಣವಾಗಿದೆ.
ಕಂಪ್ಯೂಟರ್, ಲ್ಯಾಪ್ಟಾಪ್, ಬಯೋಮೆಟ್ರಿಕ್ ಸಾಧನ ಸೇರಿದಂತೆ ತಾಂತ್ರಿಕ ಉಪಕರಣಗಳಲ್ಲಿ ದೋಷ ಕಂಡುಬಂದರೆ ಅವುಗಳ ದುರಸ್ತಿ ವೆಚ್ಚವನ್ನೂ ಮಾಲೀಕರೇ ಭರಿಸಬೇಕಾಗಿದೆ. ಈಗಾಗಲೇ ಕಡಿಮೆ ಪ್ರಮಾಣದ ಕಮಿಷನ್ ಸಿಗುತ್ತಿದ್ದು, ಅದೂ ಸಕಾಲದಲ್ಲಿ ಪಾವತಿಯಾಗದಿರುವುದರಿಂದ ನಿರ್ವಹಣಾ ವೆಚ್ಚವನ್ನು ಭರಿಸುವುದು ದುಸ್ತರವಾಗಿದೆ ಎಂದು ಅವರು ನ್ಯಾಯ ಬೆಲೆ ಅಂಗಡಿ ಮಾಲೀಕರ ವಾದವಾಗಿದೆ.
ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿ ಮಾಲೀಕರುಗಳು ಕಮಿಷನ್ಗಾಗಿ ತಾಲೂಕು ಮಟ್ಟದ ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಡುಂಬಾಲು ಬೀಳುವುದು ಒಂದೆಡೆಯಾದರೆ ಇತ್ತೀಚಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಕಳೆದ ಐದು ತಿಂಗಳ ಕಮಿಷನ್ ಹಣ ಸಹಿ ಮಾಡುವುದಕ್ಕೆ ತಮ್ಮ ಟೇಬಲ್ನ ಮೇಲೆ ಹತ್ತು ಹದಿನೈದು ದಿನಗಳಿಂದ ಸಹಿ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಹೆಸರೆಳದ ನ್ಯಾಯ ಬೆಲೆ ಅಂಗಡಿ ಮಾಲೀಕರು ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
*ಕಮಿಷನ್ ದರವನ್ನೂ ಹೆಚ್ಚಿಸಲು ಆಗ್ರಹ*
ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರಸ್ತುತ ನೀಡುತ್ತಿರುವ ಕಮಿಷನ್ ದರವನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ. ದಿನನಿತ್ಯದ ಖರ್ಚು, ತಾಂತ್ರಿಕ ನಿರ್ವಹಣೆ ಹಾಗೂ ಕಾರ್ಮಿಕರ ಕೂಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿನ ಕಮಿಷನ್ ಮೊತ್ತ ಸಮರ್ಪಕವಾಗಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಪಡಿತರ ವಿತರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ನಮಗೆ ನೀಡಬೇಕಾದ ಕಮಿಷನ್ ಮಾತ್ರ ಸಕಾಲದಲ್ಲಿ ಬರುತ್ತಿಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲೀಕ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಿಗಾಗಿ ಕಡತಗಳು ತಿಂಗಳುಗಟ್ಟಲೆ ಬಾಕಿ ಉಳಿಯುವ ಬದಲು, ಕಮಿಷನ್ ಮೊತ್ತವನ್ನು ನೇರವಾಗಿ ಅಂಗಡಿ ಮಾಲೀಕರ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ನ್ಯಾಯಬೆಲೆ ಅಂಗಡಿ ಮಾಲೀಕ ನಂದೀಶ್ ಒತ್ತಾಯಿಸಿದ್ದಾರೆ.
ಬಡವರ ಪರವಾಗಿರುವ ಅನ್ನಭಾಗ್ಯ ಸೇರಿದಂತೆ ಪಡಿತರ ವಿತರಣಾ ಯೋಜನೆಗಳನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸುವಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಡಿಮೆ ಕಮಿಷನ್ನಲ್ಲಿಯೇ ಹಲವು ವೆಚ್ಚಗಳನ್ನು ಭರಿಸುತ್ತಿರುವ ನಮಗೆ ಆರು ತಿಂಗಳಿಗೊಮ್ಮೆ ಹಣ ಪಾವತಿಯಾದರೆ ಅಂಗಡಿಗಳ ನಿರ್ವಹಣೆ ಹೇಗೆ ಸಾಧ್ಯ? ಆಯಾ ತಿಂಗಳ ಕಮಿಷನ್ ಅದೇ ತಿಂಗಳಲ್ಲಿ ಪಾವತಿಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಚಿಕ್ಕರಂಗಯ್ಯ ಆಗ್ರಹಿಸಿದ್ದಾರೆ.
*ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ*
ಬಡವರ ಮನೆಗಳಿಗೆ ಆಹಾರ ಧಾನ್ಯ ತಲುಪಿಸುವ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಕೊಂಡಿಯಾಗಿರುವ ನ್ಯಾಯಬೆಲೆ ಅಂಗಡಿಗಳ ನಿರ್ವಹಣೆ ಸುಗಮವಾಗುವುದು ಅತ್ಯಗತ್ಯ. ಹೀಗಾಗಿ ಬಾಕಿ ಇರುವ ಕಮಿಷನ್ ಹಣವನ್ನು ಕೂಡಲೇ ಬಿಡುಗಡೆ ಮಾಡಿ, ಮುಂದಿನ ದಿನಗಳಲ್ಲಿ ಯಾವುದೇ ವಿಳಂಬವಿಲ್ಲದೆ ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವ ವ್ಯವಸ್ಥೆ ಕಲ್ಪಿಸಬೇಕು.
ಜತೆಗೆ ಕಮಿಷನ್ ದರ ಪರಿಷ್ಕರಿಸಿ, ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗುವ ವೆಚ್ಚಕ್ಕೂ ಸೂಕ್ತ ಪರಿಹಾರ ಒದಗಿಸಬೇಕು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
