ಹಾಸನ: ವಿಶ್ವ ಅಂಚೆ ದಿನದ ಅಂಗವಾಗಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ರೈಸ್ ವತಿಯಿಂದ ಅಕ್ಟೋಬರ್ 9ರಂದು ನಗರದ ಮಲ್ಲಿಗೆ ಹೋಟೆಲ್ನಲ್ಲಿ ವಿಶ್ವ ಅಂಚೆ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾಜಕ್ಕೆ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಗುರುತಿಸಿ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಂಗಸ್ವಾಮಿ, ಸಂದೀಪ್, ಪ್ರವೀಣ್ ಶೆಟ್ಟಿ ಹಾಗೂ ಜಯೇಂದ್ರ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಸದಸ್ಯ ಭುವನೇಶ್ ಅವರು ವಿಶ್ವ ಅಂಚೆ ದಿನದ ಮಹತ್ವ ಹಾಗೂ ಜನಸಾಮಾನ್ಯರ ಜೀವನದಲ್ಲಿ ಅಂಚೆ ಇಲಾಖೆಯ ಪಾತ್ರದ ಕುರಿತು ವಿವರಿಸಿದರು. ಸದಸ್ಯೆ ಪ್ರೇಮಾ ಅವರು ಅಂಚೆ ಸಿಬ್ಬಂದಿಯ ಸೇವೆ, ಬದ್ಧತೆ ಹಾಗೂ ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಕೆ.ಎಸ್. ಯೋಗೇಶ್ ಮಾತನಾಡಿ, ಅಂಚೆ ಸಿಬ್ಬಂದಿ ಪತ್ರಗಳು, ದಾಖಲೆಗಳು ಹಾಗೂ ಅಗತ್ಯ ಮಾಹಿತಿಯನ್ನು ಜನರಿಗೆ ತಲುಪಿಸುವ ಮೂಲಕ ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಅವರ ನಿಷ್ಠೆ, ಪರಿಶ್ರಮ ಹಾಗೂ ಜನಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಲಬ್ ಕಾರ್ಯದರ್ಶಿ ಬಿ.ಎಂ. ದರ್ಶನ್, ಮಾಜಿ ಅಧ್ಯಕ್ಷ ವಜ್ರ ಕುಮಾರ್, ಸಿದ್ದನಂಜಪ್ಪ, ಗುರುಮೂರ್ತಿ, ಭುವನೇಶ್, ಬೂದೇಶ್, ಮಲ್ಲಿಕಾರ್ಜುನ್ ಹಾಗೂ ಸದಸ್ಯೆ ಪ್ರೇಮಾ ಸೇರಿದಂತೆ ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು.
ಅಂಚೆ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಗೌರವಿಸುವ ಮೂಲಕ ರೋಟರಿ ಕ್ಲಬ್ ಆಫ್ ಹಾಸನ್ ಸನ್ರೈಸ್ ತನ್ನ ಸಮಾಜಮುಖಿ ಕಾರ್ಯಗಳ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕ್ಲಬ್ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.
– ಟೀಮ್ ಸನ್ರೈಸ್
