ಹಾಸನ: ಶ್ರೀ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಡಿಸೆಂಬರ್ 2, 2026ರಂದು ಹಾಸನದಲ್ಲಿ ನಡೆಯಲಿರುವ ಧಾರ್ಮಿಕ ಸಮ್ಮೇಳನದ ಪೂರ್ವಸಿದ್ಧತೆಗಾಗಿ ಅಕ್ಟೋಬರ್ 13ರಂದು ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಸಂಘದ ವತಿಯಿಂದ ಧಾರ್ಮಿಕ ಸಮ್ಮೇಳನವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಮಂಗಳವಾರ ಸಂಜೆ 5 ಗಂಟೆಗೆ ಹಾಸನದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ನಡೆಯಲಿದೆ.
ಸಭೆಯಲ್ಲಿ ಸಮ್ಮೇಳನದ ಸಿದ್ಧತೆಗಳು, ಕಾರ್ಯಕ್ರಮದ ರೂಪುರೇಷೆಗಳು ಹಾಗೂ ವಿವಿಧ ಸಮಿತಿಗಳ ಜವಾಬ್ದಾರಿಗಳ ಕುರಿತು ಚರ್ಚಿಸಿ, ಸಮಾಜದ ಬಂಧುಗಳ ಸಲಹೆ ಮತ್ತು ಸಹಕಾರ ಪಡೆಯಲಾಗುತ್ತದೆ.
ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ಸಾನ್ನಿಧ್ಯ ವಹಿಸಲಿದ್ದಾರೆ.
ಸಭೆಗೆ ವೀರಶೈವ-ಲಿಂಗಾಯತ ಸಮಾಜದ ಬಂಧುಗಳು, ಮುಖಂಡರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಯುವ ಘಟಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸಮಿತಿಯ ಸದಸ್ಯರು ಮತ್ತು ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್.ವಿ. ಹೇಮಂತ್ ಕುಮಾರ್ ಮನವಿ ಮಾಡಿದ್ದಾರೆ.
