ರಾಮನಾಥಪುರ, ಅ. 13: ಗಣೇಶ ಹಬ್ಬದ ಆಚರಣೆಯಲ್ಲಿ ಯುವಕರು ಡಿಜೆ ಹಾಗೂ ಆಡಂಬರಕ್ಕೆ ಹೆಚ್ಚು ಒತ್ತು ನೀಡದೆ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಭಕ್ತಿ, ಶ್ರದ್ಧೆ, ಶಾಂತಿ ಮತ್ತು ಸೌಹಾರ್ದತೆಯಿಂದ ಸರ್ಕಾರದ ನಿಯಮಗಳನ್ನು ಪಾಲಿಸಿ ಹಬ್ಬ ಆಚರಿಸಬೇಕು ಎಂದು ಸಮಾಜ ಸೇವಕ ಹಾಗೂ ಶ್ರೀ ವರದಾನ ಬಸವೇಶ್ವರ ಭಕ್ತ ಯುವಕ ಬಳಗದ ಮುಖ್ಯಸ್ಥ ನಾಗೇಶ್ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗೇಶ್, ಗಣೇಶ ಹಬ್ಬವೆಂದರೆ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಯುವಶಕ್ತಿಯ ಒಗ್ಗಟ್ಟು ಮತ್ತು ಸಾಮರಸ್ಯದ ಸಂಕೇತವಾಗಿದೆ. ಯುವಕರು ಜಾತಿ-ಭೇದ ಮರೆತು ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಣ್ಣಿನ ಗಣೇಶ ಮೂರ್ತಿಗಳಿಗೆ ಆದ್ಯತೆ ನೀಡಬೇಕು. ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿ, ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಕಳೆದ 60 ವರ್ಷಗಳಿಂದ ಗೌರಿ-ಗಣೇಶ ಹಬ್ಬದ ಅಂಗವಾಗಿ ನಿರಂತರವಾಗಿ 30 ದಿನಗಳ ಕಾಲ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ನಮ್ಮ ಭಾಗ್ಯವಾಗಿದೆ. ಯುವಕರು ತೋರುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಸಹಕಾರಕ್ಕೆ ಸದಾ ಋಣಿಯಾಗಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಗೌರಿ-ಗಣೇಶ ಯುವಕರ ಬಳಗದ ಪದಾಧಿಕಾರಿಗಳು, ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.
