ಚನ್ನರಾಯಪಟ್ಟಣ: ಹೆಣ್ಣುಮಕ್ಕಳಿಗೆ ಕೇವಲ ವಿದ್ಯೆ ನೀಡುವುದಷ್ಟೇ ಅಲ್ಲದೆ, ಜ್ಞಾನ, ಧಾರ್ಮಿಕ ಸಂಸ್ಕಾರ ಹಾಗೂ ಜೀವನಮೌಲ್ಯಗಳನ್ನು ಕಲಿಸಿ, ಅವರ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವಾಗಬೇಕು ಎಂದು ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಶ್ರೀ ಧವಲತೀರ್ಥಂನಲ್ಲಿರುವ ಗೊಮ್ಮಟೇಶ್ವರ ವಿದ್ಯಾಪೀಠದ ಕಾಳಾಲದೇವಿ ಕನ್ಯಾಶ್ರಮದ ವಿದ್ಯಾರ್ಥಿನಿಯರಿಗಾಗಿ ಧರ್ಮಸ್ಥಳದ ಪರಿವಾರದ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ವಸತಿಗೃಹದ ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನವಿದೆ. ಭೂಮಾತೆ, ಭಾರತಾಂಬೆ, ಕನ್ನಡಾಂಬೆ ಎಂದು ಗೌರವಿಸುವ ನಾವು, ನದಿಗಳು, ಪ್ರಕೃತಿ ಹಾಗೂ ವೃಕ್ಷಗಳನ್ನೂ ಮಾತೃಸ್ವರೂಪದಲ್ಲಿ ಕಾಣುತ್ತೇವೆ. ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ, ಸರಸ್ವತಿಯನ್ನು ಜ್ಞಾನದ ಅಧಿದೇವತೆ ಎಂದು ಆರಾಧಿಸುವ ಸಂಸ್ಕೃತಿ ನಮ್ಮದು. ಇಂತಹ ಪರಂಪರೆ ಹೊಂದಿದ್ದರೂ ಹೆಣ್ಣುಮಕ್ಕಳ ಶಿಕ್ಷಣದ ವಿಚಾರದಲ್ಲಿ ಸಮಾಜದಲ್ಲಿ ಹಿಂಜರಿಕೆಯ ಮನೋಭಾವ ಕಂಡುಬರುವುದು ವಿಪರ್ಯಾಸ ಎಂದರು.

ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾಗಿ, ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಅಗತ್ಯ ಅವಕಾಶಗಳನ್ನು ಕಲ್ಪಿಸಬೇಕು. ಶಿಕ್ಷಣದ ಜತೆಗೆ ಆತ್ಮವಿಶ್ವಾಸ, ಅಂತರಂಗದ ಅನುಭೂತಿ ಹಾಗೂ ಉತ್ತಮ ಸಂಸ್ಕಾರ ಬೆಳೆಸುವುದು ಮುಖ್ಯ. ಶಿಕ್ಷಣವು ಉದ್ಯೋಗ ಪಡೆಯುವ ಸಾಧನವಾಗುವುದರ ಜತೆಗೆ ವ್ಯಕ್ತಿತ್ವ ವಿಕಸನ ಮತ್ತು ಸುಸಂಸ್ಕೃತ ಬದುಕಿಗೂ ದಾರಿಯಾಗಬೇಕು. ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದರು.
ಧರ್ಮಸ್ಥಳದ ಪರಿವಾರವು ಪರೋಪಕಾರ ಹಾಗೂ ಸಮಾಜಸೇವೆಗೆ ಹೆಸರಾಗಿದೆ. ಕನ್ಯಾಶ್ರಮಕ್ಕೆ ವಸತಿಗೃಹದ ಅಗತ್ಯವಿರುವುದನ್ನು ತಿಳಿಸಿದಾಗ, ಮಾತೃಶ್ರೀ ರತ್ನಮ್ಮನವರ ಸ್ಮರಣಾರ್ಥ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಸಂತಸದ ಸಂಗತಿ. ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಪರಿವಾರದ ವತಿಯಿಂದ ಸುಮಾರು 200 ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ 54 ಕೊಠಡಿಗಳ ಸುಸಜ್ಜಿತ ವಸತಿಗೃಹ ನಿರ್ಮಿಸಲಾಗುತ್ತಿದೆ ಎಂದರು.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು ಮಹತ್ವದ ಸೇವೆ
ಡಿ. ಸುರೇಂದ್ರ ಕುಮಾರ್ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಅವರ ಭವಿಷ್ಯ ರೂಪಿಸುವ ಕಾರ್ಯಕ್ಕೆ ನೆರವಾಗುವುದು ಮಹತ್ವದ ಸೇವೆಯಾಗಿದೆ. ವಿದ್ಯಾರ್ಥಿನಿಯರು ಉತ್ತಮ ಪರಿಸರದಲ್ಲಿ ವಾಸಿಸಿ, ವಿದ್ಯಾಭ್ಯಾಸದ ಜತೆಗೆ ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು. ನೂತನ ಕಟ್ಟಡವು ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿ ಎಂದು ಆಶಿಸಿದರು.
ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ 2023ರಲ್ಲಿ ಗೊಮ್ಮಟೇಶ್ವರ ವಿದ್ಯಾಪೀಠವನ್ನು ಪುನರಾರಂಭಿಸಿ, ಲೌಕಿಕ ಶಿಕ್ಷಣದ ಜತೆಗೆ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರ ನೀಡಲಾಗುತ್ತಿದೆ. ಹೆಣ್ಣುಮಕ್ಕಳ ಶಿಕ್ಷಣವೇ ಕುಟುಂಬ ಹಾಗೂ ಸಮಾಜದ ಸಂಸ್ಕಾರದ ಆಧಾರ ಎಂಬ ಆಶಯದೊಂದಿಗೆ 2024ರಲ್ಲಿ ಕಾಳಾಲದೇವಿ ಕನ್ಯಾಶ್ರಮ ಆರಂಭಿಸಲಾಗಿದೆ. ಪ್ರಸ್ತುತ ಸುಮಾರು 80 ವಿದ್ಯಾರ್ಥಿನಿಯರು ಗುರುಕುಲ ಮಾದರಿಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ ಎಂದರು.

ಶಿಕ್ಷಣದ ಜತೆಗೆ ಸಂಸ್ಕಾರವೂ ಅಗತ್ಯ
ಅನಿತಾ ಸುರೇಂದ್ರ ಕುಮಾರ್ ಮಾತನಾಡಿ, ಕುಟುಂಬ ಹಾಗೂ ಸಮಾಜದಲ್ಲಿ ಸಂಸ್ಕಾರ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಹೆಣ್ಣುಮಕ್ಕಳ ಪಾತ್ರ ಮಹತ್ವದ್ದಾಗಿದೆ. ಅವರ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜತೆಗೆ ಧಾರ್ಮಿಕ ಪ್ರಜ್ಞೆ, ಉತ್ತಮ ಸಂಸ್ಕಾರ ಹಾಗೂ ಜೀವನಮೌಲ್ಯಗಳನ್ನು ಬೆಳೆಸಬೇಕು ಎಂಬುದು ಸ್ವಾಮೀಜಿಯವರ ಆಶಯವಾಗಿದೆ ಎಂದು ಹೇಳಿದರು.
ಕನ್ಯಾಶ್ರಮ ಆರಂಭವಾದಾಗ ಕೆಲವೇ ವಿದ್ಯಾರ್ಥಿನಿಯರಿದ್ದರು. ಇದೀಗ ಆ ಸಂಖ್ಯೆ ಸುಮಾರು 80ಕ್ಕೆ ತಲುಪಿರುವುದು ಸಂತಸದ ಸಂಗತಿ. ಹೆಚ್ಚಿನ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ವಸತಿಗೃಹದ ಅಗತ್ಯವಿತ್ತು. ಮಾತೃಶ್ರೀ ರತ್ನಮ್ಮನವರ ಸ್ಮರಣಾರ್ಥ ಈ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದರು.
ನಗರ ಪ್ರದೇಶಗಳಲ್ಲಿ ಧಾರ್ಮಿಕತೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು. ವಿದ್ಯಾಭ್ಯಾಸದ ಜತೆಗೆ ಧಾರ್ಮಿಕ ಪ್ರಜ್ಞೆ ಬೆಳೆಸಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಸ್ವಾಮೀಜಿಯವರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿದ್ದಾರೆ. ಕ್ಷೇತ್ರದ ಪರಂಪರೆಗೆ ಅನುಗುಣವಾಗಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾಜಸೇವೆಯನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಡಿ. ಸುರೇಂದ್ರ ಕುಮಾರ್ ಅವರು ನೂತನ ಕಟ್ಟಡದ ಪ್ರಥಮ ಶಿಲೆ ಸ್ಥಾಪಿಸಿದರು. ಅನಿತಾ ಸುರೇಂದ್ರ ಕುಮಾರ್ ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಗಣ್ಯರು, ಮಠದ ಪ್ರತಿನಿಧಿಗಳು ಹಾಗೂ ಗೊಮ್ಮಟೇಶ್ವರ ವಿದ್ಯಾಪೀಠದ ಸಿಬ್ಬಂದಿ ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
