ಬೆಂಗಳೂರು, ಅಕ್ಟೋಬರ್ 16, 2026: ಎಂಜಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) 2026-27ರ ಸಾಲಿನ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ಮತ್ತು ಚೆನ್ನೈಯಿನ್ ಎಫ್ಸಿ ತಂಡಗಳು ಶನಿವಾರ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಈ ಮೂಲಕ ದಕ್ಷಿಣ ಭಾರತದ ಫುಟ್ಬಾಲ್ ಪೈಪೋಟಿ ಮತ್ತೊಮ್ಮೆ ರಂಗೇರಲಿದೆ. ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಸ್ಪೋರ್ಟಿಂಗ್ ಕ್ಲಬ್ ದೆಹಲಿ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ದಾಖಲಿಸಿರುವ ಬೆಂಗಳೂರು ಎಫ್ಸಿ, ಅದೇ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ. ಇತ್ತ, ತನ್ನ ಹಿಂದಿನ ಪಂದ್ಯದಲ್ಲಿ ಎಫ್ಸಿ ಗೋವಾ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿರುವ ಚೆನ್ನೈಯಿನ್ ಎಫ್ಸಿ, ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
ಆರಂಭಿಕ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ತಂಡವು ತನ್ನ ಆಕ್ರಮಣಕಾರಿ ಆಟ ಹಾಗೂ ಕೊನೆಯ ಕ್ಷಣದವರೆಗೂ ಹೋರಾಡುವ ಛಲವನ್ನು ಪ್ರದರ್ಶಿಸಿತ್ತು. ಬೋರ್ಜಾ ಮಾರ್ಟಿನೆಜ್ ಎರಡು ಗೋಲುಗಳನ್ನು ಗಳಿಸಿದ್ದರು. 75ನೇ ನಿಮಿಷದಲ್ಲಿ ಅವರು ದಾಖಲಿಸಿದ ಗೋಲು ತಂಡದ ಹೋರಾಟಕ್ಕೆ ಮತ್ತಷ್ಟು ಬಲ ನೀಡಿತ್ತು. ಬಳಿಕ 89ನೇ ನಿಮಿಷದಲ್ಲಿ ಮೆನ್ನೊ ಕೋಚ್ ಹೆಡರ್ ಮೂಲಕ ಗೋಲು ದಾಖಲಿಸಿ ಬೆಂಗಳೂರು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.
ಆರಂಭಿಕ ಪಂದ್ಯದ ಕುರಿತು ಮಾತನಾಡಿದ ಬೆಂಗಳೂರು ಎಫ್ಸಿ ಮುಖ್ಯ ಕೋಚ್ ಪೆಪ್ ಮುನೋಝ್, “ನಾವು ವೈಯಕ್ತಿಕ ಪೈಪೋಟಿಗಳಲ್ಲಿ ಇನ್ನಷ್ಟು ಬಲವಾಗಿ ಹೋರಾಡಬೇಕು” ಎಂದು ಹೇಳಿದರು. ಸ್ಪೋರ್ಟಿಂಗ್ ಕ್ಲಬ್ ದೆಹಲಿ ತಂಡವು ತಮ್ಮ ತಂಡಕ್ಕೆ ಕಠಿಣ ಸವಾಲೊಡ್ಡುವಲ್ಲಿ ಯಶಸ್ವಿಯಾಗಿದೆ ಎಂದು ಒಪ್ಪಿಕೊಂಡ ಅವರು, ರಕ್ಷಣಾ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು. ಚೆನ್ನೈಯಿನ್ ಎಫ್ಸಿ ತಂಡವು ಕಠಿಣ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ಎಫ್ಸಿ ಮತ್ತು ಚೆನ್ನೈಯಿನ್ ಎಫ್ಸಿ ತಂಡಗಳ ನಡುವಿನ ಪೈಪೋಟಿಗೆ ಸುದೀರ್ಘ ಇತಿಹಾಸವಿದೆ. 2017-18ರ ಐಎಸ್ಎಲ್ ಫೈನಲ್ನಲ್ಲಿ ಚೆನ್ನೈಯಿನ್ ಎಫ್ಸಿ ತಂಡವು ಶ್ರೀ ಕಂಠೀರವ ಕ್ರೀಡಾಂಗಣದಲ್ಲೇ ಬೆಂಗಳೂರು ಎಫ್ಸಿಯನ್ನು 3-2 ಗೋಲುಗಳಿಂದ ಮಣಿಸಿ ಪ್ರಶಸ್ತಿ ಗೆದ್ದಿತ್ತು. ಆದರೆ, ಕಳೆದ ಋತುವಿನಲ್ಲಿ ಉಭಯ ತಂಡಗಳ ನಡುವಿನ ಕೊನೆಯ ಪಂದ್ಯದಲ್ಲಿ ಸೆರ್ಟೊ ವೊರ್ನಿಲೆನ್ ಕೋಮ್ 89ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್ಸಿ 2-1 ಗೋಲುಗಳಿಂದ ಗೆಲುವು ಸಾಧಿಸಿತ್ತು. ಈ ಬಾರಿ ಚೆನ್ನೈಯಿನ್ ಎಫ್ಸಿ ತಂಡದ ರಕ್ಷಣಾ ಆಟಗಾರ ನಾಮ್ಗ್ಯಾಲ್ ಭುಟಿಯಾ ತಮ್ಮ ಮಾಜಿ ಕ್ಲಬ್ ಬೆಂಗಳೂರು ಎಫ್ಸಿ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಬೆಂಗಳೂರು ಎಫ್ಸಿ ಮತ್ತು ಚೆನ್ನೈಯಿನ್ ಎಫ್ಸಿ ನಡುವಿನ ಪಂದ್ಯವು ಅಕ್ಟೋಬರ್ 17ರ ಶನಿವಾರ ರಾತ್ರಿ 7:30ಕ್ಕೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
