ಹಾಸನ: ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಹೇಳಿದರು.

ನಗರದ ಟೈಮ್ಸ್ ಗುರುಕುಲ ಹಾಗೂ ಪಿಯು ಕಾಲೇಜಿನ ಸಭಾಂಗಣದಲ್ಲಿ ಮಾಣಿಕ್ಯ ಪ್ರಕಾಶನ (ರಿ.), ಹಾಸನ ವತಿಯಿಂದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವ ವಿದ್ಯಾರ್ಥಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಕಲಾಂ ನೀಡಿದ ಕೊಡುಗೆ ಅಪಾರ. ವಿದ್ಯಾರ್ಥಿಗಳ ಮೇಲಿನ ಪ್ರೀತಿ, ಮಾನವೀಯ ಮೌಲ್ಯಗಳು ಹಾಗೂ ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಅವರ ಪ್ರಯತ್ನಗಳನ್ನು ಸ್ಮರಿಸುವುದು ಈ ಆಚರಣೆಯ ಉದ್ದೇಶವಾಗಿದೆ. ಶಿಕ್ಷಣವು ನಾಲ್ಕು ಗೋಡೆಗಳ ಮಧ್ಯೆ ಅಥವಾ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ, ಬದುಕಿನ ಎಲ್ಲ ಆಯಾಮಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಟೈಮ್ಸ್ ಗುರುಕುಲ ಪಿಯು ಕಾಲೇಜು ಎ.ಬಿ. ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಅಮೋಘ ಸುದ್ದಿ ವಾಹಿನಿಯ ಮುಖ್ಯಸ್ಥ ಕೆ.ಪಿ.ಎಸ್. ಪ್ರಮೋದ್ ಮಾತನಾಡಿ, ಕನಸುಗಳು ಆಲೋಚನೆಗಳಾಗಿ, ಆಲೋಚನೆಗಳು ಕಾರ್ಯರೂಪಕ್ಕೆ ಬಂದು ಯಶಸ್ಸಿನ ಫಲ ನೀಡುತ್ತವೆ ಎಂಬ ಸಂದೇಶವನ್ನು ಕಲಾಂ ಸಾರಿದ್ದರು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿಗಳನ್ನು ಹೊಂದಿ, ಅವುಗಳ ಸಾಧನೆಗಾಗಿ ನಿರಂತರ ಶ್ರಮಿಸಬೇಕು. ಕಷ್ಟಗಳನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಲಾಂ ಅವರು ತಮ್ಮ ಜೀವನದ ಬಹುಭಾಗವನ್ನು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು, ಯುವಜನರನ್ನು ಪ್ರೇರೇಪಿಸಲು ಹಾಗೂ ಮಾರ್ಗದರ್ಶನ ಮಾಡಲು ಮೀಸಲಿಟ್ಟಿದ್ದರು. ಮಕ್ಕಳೊಂದಿಗೆ ಮಗುವಾಗಿ ಬೆರೆತು ಜ್ಞಾನ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸುತ್ತಿದ್ದರು. ಬೋಧನೆಯಲ್ಲಿದ್ದಾಗಲೇ ಕೊನೆಯುಸಿರೆಳೆದ ಅವರ ಜೀವನ ವಿದ್ಯಾರ್ಥಿಗಳಿಗೆ ಸದಾ ಪ್ರೇರಣೆಯಾಗಿರುತ್ತದೆ ಎಂದರು.
ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಕಲಾಂ ಅವರು ಹಾಸನದ ಬಾಹ್ಯಾಕಾಶ ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಗರದ ಕಲಾಭವನದಲ್ಲಿ ಸುಮಾರು ಎರಡು ಸಾವಿರ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ಮಕ್ಕಳ ಮೇಲಿನ ಅವರ ವಿಶೇಷ ಪ್ರೀತಿ ಮತ್ತು ಕಾಳಜಿಗೆ ಇದು ಸಾಕ್ಷಿಯಾಗಿದೆ. ಸರಳತೆ, ಯುವಜನರ ಸಾಮರ್ಥ್ಯದ ಮೇಲಿನ ನಂಬಿಕೆ ಹಾಗೂ ವಿಜ್ಞಾನ ಮತ್ತು ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿ ಸಾಧಿಸಬೇಕೆಂಬ ಅವರ ಆಶಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸ್ಮರಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟೈಮ್ಸ್ ಗುರುಕುಲ ಪಿಯು ಕಾಲೇಜಿನ ಕಾರ್ಯದರ್ಶಿ ಎ.ಬಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಮಾಣಿಕ್ಯ ಪ್ರಕಾಶನದ ವತಿಯಿಂದ ಮಕ್ಕಳಿಗೆ ಕನ್ನಡ, ಕರ್ನಾಟಕ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು.
ವೇದಿಕೆಯಲ್ಲಿ ಆಲೂರು ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು, ಪ್ರಕಾಶಕಿ ದೀಪಾ ಉಪ್ಪಾರ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ತಾಲ್ಲೂಕು ಅಧ್ಯಕ್ಷೆ ಕೆ.ಸಿ. ಗೀತಾ ಹಾಗೂ ತಾಲ್ಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ ಉಪಸ್ಥಿತರಿದ್ದರು.
