ಶ್ಲೋಕ – 03
ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ ॥೩॥
ತ್ಯಾಜ್ಯಂ ದೋಷವತ್ ಇತಿ ಏಕೇ ಕರ್ಮ ಪ್ರಾಹುಃ ಮನೀಷಿಣಃ ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮ್ ಇತಿ ಚ ಅಪರೇ – ದೋಷವುಳ್ಳ ಕರ್ಮವನ್ನು ತೊರೆಯಬೇಕು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಬಾರದು ಎನ್ನುತ್ತಾರೆ ಮತ್ತೆ ಕೆಲವರು.
ಕರ್ಮತ್ಯಾಗದ ಬಗ್ಗೆ ಒಂದೊಂದು ಶಾಸ್ತ ಒಂದೊಂದು ರೀತಿ ಹೇಳಿದಂತೆ ನಮಗೆ ಕಾಣುತ್ತದೆ. ಆದರೆ ಎಲ್ಲಾ ಶಾಸ್ತ್ರಗಳ ಅಂತರಂಗದ ತಿರುಳು ಒಂದೆ. ತ್ಯಾಗ ಅಂದರೆ ಏನು ಎನ್ನುವುದು ತಿಳಿದಾಗ ಇದು ಸ್ಪಷ್ಟವಾಗುತ್ತದೆ. ತಿಳಿದ ಬುದ್ಧಿವಂತರು ಹೇಳುತ್ತಾರೆ: “ಕರ್ಮವನ್ನು ಬಿಡಬೇಕು” ಎಂದು. ಇನ್ನು ಕೆಲವು ವೇದಾನುಯಾಯಿಗಳು ಹೇಳುತ್ತಾರೆ: “ಯಜ್ಞ-ದಾನ-ತಪಸ್ಸನ್ನು ಮಾಡಬೇಕು” ಎಂದು. “ನಿನ್ನ ಉಸಿರಿರುವ ತನಕ ಅಗ್ನಿಹೊತ್ರದಿಂದ ಭಗವಂತನನ್ನು ಆರಾಧಿಸು” ಎನ್ನುತ್ತದೆ-ಯಜುರ್ವೇದ. ಇಲ್ಲಿ ಹೇಳಿದ ವಿಷಯ ಸರಿಯಾಗಿ ಅರ್ಥವಾಗಬೇಕಾದರೆ ನಾವು ತ್ಯಾಗ ಪದದ ಅರ್ಥವನ್ನು ವಿವಿಧ ಮುಖದಲ್ಲಿ ನೋಡಬೇಕು. ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಇದರ ಸುಂದರ ವಿವರಣೆಯನ್ನು ಕೊಟ್ಟಿದ್ದಾನೆ.
