ಕೊರಟಗೆರೆ : ಪ್ರತಿ ಗ್ರಾಮ ಪಂಚಾಯಿತಿಗೊಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿದರೆ ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಕ್ರೀಡೆಗಳು ಜೀವಂತವಾಗಿದ್ದರೆ ಯುವಜನರ ಆರೋಗ್ಯ ಕಾಪಾಡುವುದರ ಜೊತೆಗೆ ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿಗೊಂದು ಕ್ರೀಡಾಂಗಣ ಒದಗಿಸುವುದು ಸರ್ಕಾರಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಸಮಾಜಸೇವಕ ಹಾಗೂ ಕೈಗಾರಿಕಾ ಉದ್ಯಮಿ ಎಂ.ಎನ್.ಜೆ. ಮಂಜುನಾಥ್ ಆಗ್ರಹಿಸಿದರು.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರ ಗ್ರಾಮದಲ್ಲಿ ಆಯೋಜಿಸಿದ್ದ ದಸರಾ ಕ್ರಿಕೆಟ್ ಕಪ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕ್ರೀಡೆಯು ಶಿಸ್ತು, ಸಮಯಪ್ರಜ್ಞೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ ಪ್ರತಿಭಾವಂತ ಕ್ರೀಡಾಪಟುಗಳು ರೂಪುಗೊಳ್ಳಲು ಸಹಕಾರಿಯಾಗಿದೆ. ಗ್ರಾಮೀಣ ಯುವಕರಿಗೆ ಅಗತ್ಯ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಆಟದ ಮೈದಾನಗಳನ್ನು ನಿರ್ಮಿಸುವುದು ಗ್ರಾಮೀಣ ಅಭಿವೃದ್ಧಿಯ ಭಾಗವಾಗಬೇಕು ಎಂದು ತಿಳಿಸಿದರು.
ಅಗ್ರಹಾರ ಗ್ರಾಮದಲ್ಲಿ ನೂರಾರು ಯುವ ಕ್ರೀಡಾಪಟುಗಳು ಬೈರೇನಹಳ್ಳಿಯಿಂದ ಅಗ್ರಹಾರದವರೆಗೆ ಬೈಕ್ ರ್ಯಾಲಿ ನಡೆಸುವ ಮೂಲಕ ಸಮಾಜಸೇವಕ ಎಂ.ಎನ್.ಜೆ. ಮಂಜುನಾಥ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು. ಬಳಿಕ ಮಂಜುನಾಥ್ ಅವರು ಕ್ರಿಕೆಟ್ ಆಡುವ ಮೂಲಕ ದಸರಾ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಕೆಟ್ ಟೂರ್ನಿ ಆಯೋಜನೆ: ಮಂಜುನಾಥ್
ಕೋಟ್: “ಶಿಕ್ಷಣ ಮತ್ತು ಕ್ರೀಡೆ ಗ್ರಾಮೀಣ ಯುವಕರ ಪ್ರಮುಖ ಆಸ್ತಿಗಳಾಗಿವೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಮುಂದಾಗುತ್ತೇನೆ. ಕ್ರೀಡೆಯಿಂದಲೇ ನಾಯಕತ್ವದ ಗುಣಗಳು ಬೆಳೆಯುತ್ತವೆ. ಪ್ರತಿಯೊಂದು ಹಳ್ಳಿಯಲ್ಲೂ ಯುವ ನಾಯಕತ್ವ ರೂಪುಗೊಳ್ಳಬೇಕು. ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರ ಇರಲಿದೆ.”
— ಎಂ.ಎನ್.ಜೆ. ಮಂಜುನಾಥ್, ಕೈಗಾರಿಕಾ ಉದ್ಯಮಿ, ಕೊರಟಗೆರೆ.
ಕಾರ್ಯಕ್ರಮದಲ್ಲಿ ಅರಸಾಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ, ಬಿ.ಎಸ್. ರಾಜಣ್ಣ, ಮಂಜುನಾಥ್, ಮುಖಂಡರಾದ ನಯಾಜ್ ಅಹಮದ್, ಆನಂದ್, ಮರುಡಪ್ಪ, ರಾಯವಾರ ರಾಮಕೃಷ್ಣ, ನಂದೀಶ್, ಶಿವಕುಮಾರ್, ಮದನ್, ಪುರುಷೋತ್ತಮ, ಜಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸ್, ಕೊರಟಗೆರೆ
