ಕೊರಟಗೆರೆ:- ತಾಲ್ಲೂಕಿನ ಬಿಳೇಕಲ್ಲಹಳ್ಳಿ ಗ್ರಾಮದ ರೈತ ಕುಟುಂಬದ ವಿದ್ಯಾರ್ಥಿ ಹರ್ಷಾನಂದ ಬಿ.ಜಿ. ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಚೆಸ್ ಚಾಂಪಿಯನ್ಶಿಪ್ನ ದಕ್ಷಿಣ ವಲಯದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ಗ್ರಾಮದ ರೈತ ಗೊ. ಮುನಿಯಪ್ಪ ಅವರ ಪುತ್ರ ಹರ್ಷಾನಂದ ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ. ಕೃಷಿ ಹಾಗೂ ಹೈನುಗಾರಿಕೆಯನ್ನು ಅವಲಂಬಿಸಿರುವ ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ಇವರು, ವಿದ್ಯಾಭ್ಯಾಸದ ಜತೆಗೆ ಚೆಸ್ ಕ್ರೀಡೆಯಲ್ಲಿಯೂ ಪ್ರತಿಭೆ ಮೆರೆದಿದ್ದಾರೆ.

ಆಂಧ್ರಪ್ರದೇಶದ ಸುರಂಪಾಲಂನ ಆದಿತ್ಯ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 2ರಿಂದ 5ರವರೆಗೆ ನಡೆಯಲಿರುವ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯ ಚೆಸ್ ಚಾಂಪಿಯನ್ಶಿಪ್ನಲ್ಲಿ ತುಮಕೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.
ಆರ್ಥಿಕ ಸಂಕಷ್ಟಗಳ ನಡುವೆಯೂ ಪರಿಶ್ರಮದಿಂದ ಸಾಧನೆ ಮಾಡಿರುವ ಹರ್ಷಾನಂದ ಅವರ ಆಯ್ಕೆ ಕುಟುಂಬದವರಲ್ಲಿ ಸಂತಸ ಮೂಡಿಸಿದೆ. ಗ್ರಾಮೀಣ ಪ್ರತಿಭೆಯ ಸಾಧನೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದ್ದಾರೆ.
-ಶ್ರೀನಿವಾಸ್ ಕೊರಟಗೆರೆ.
