ನವದೆಹಲಿ: 61ನೇ ಅಂತರರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಸಮಿತಿ (CIML) ಸಭೆ ಅಕ್ಟೋಬರ್ 26ರಿಂದ 28ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. ಭಾರತ ಮೊದಲ ಬಾರಿಗೆ ಈ ಸಭೆಯ ಆತಿಥ್ಯ ವಹಿಸುತ್ತಿದ್ದು, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಅಂತರರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಸಂಸ್ಥೆ (OIML) ಜಂಟಿಯಾಗಿ ಆಯೋಜಿಸುತ್ತಿವೆ.
ಸಭೆಯಲ್ಲಿ OIML ಸದಸ್ಯ ರಾಷ್ಟ್ರಗಳು, ಸಹ ಸದಸ್ಯ ರಾಷ್ಟ್ರಗಳು ಹಾಗೂ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ತಜ್ಞರು ಭಾಗವಹಿಸುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಮಾಪನ ಮಾನದಂಡಗಳ ಅಭಿವೃದ್ಧಿ, ಅಸ್ತಿತ್ವದಲ್ಲಿರುವ ಶಿಫಾರಸುಗಳ ಪರಿಷ್ಕರಣೆ ಹಾಗೂ ಮಾಪನ ಉಪಕರಣಗಳ ಪ್ರಮಾಣೀಕರಣ ವ್ಯವಸ್ಥೆ ಕುರಿತು ಚರ್ಚೆ ನಡೆಯಲಿದೆ.
ಅಕ್ಟೋಬರ್ 26ರಂದು ‘ಕಾನೂನು ಮಾಪನಶಾಸ್ತ್ರದಲ್ಲಿನ ಬದಲಾವಣೆಗಳು’ ಎಂಬ ವಿಷಯದಡಿ ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಡಿಜಿಟಲೀಕರಣ ಮತ್ತು ಜಾಗತಿಕ ಮಾಪನ ಮಾನದಂಡಗಳ ಸಮನ್ವಯಕ್ಕೆ ಒತ್ತು ನೀಡಲಾಗುತ್ತದೆ. ಅಕ್ಟೋಬರ್ 27ರಂದು OIML ಕಾರ್ಯತಂತ್ರ ಕಾರ್ಯಾಗಾರ ಆಯೋಜಿಸಲಾಗಿದ್ದು, ಸಂಸ್ಥೆಯ ಭವಿಷ್ಯದ ಆದ್ಯತೆಗಳು ಮತ್ತು ಸವಾಲುಗಳ ಕುರಿತು ಚರ್ಚಿಸಲಾಗುತ್ತದೆ.
ವ್ಯಾಪಾರ ವಹಿವಾಟುಗಳಲ್ಲಿ ತೂಕ ಮತ್ತು ಅಳತೆಗಳ ನಿಖರತೆಯನ್ನು ಖಚಿತಪಡಿಸುವುದು ಕಾನೂನು ಮಾಪನಶಾಸ್ತ್ರದ ಪ್ರಮುಖ ಉದ್ದೇಶವಾಗಿದೆ. ಭಾರತದಲ್ಲಿ 2009ರ ಕಾನೂನು ಮಾಪನಶಾಸ್ತ್ರ ಕಾಯ್ದೆಯು ತೂಕ ಮತ್ತು ಅಳತೆಗಳ ಮಾನದಂಡ ಹಾಗೂ ಅವುಗಳ ವಾಣಿಜ್ಯ ಬಳಕೆಗೆ ಕಾನೂನು ಚೌಕಟ್ಟು ಒದಗಿಸುತ್ತದೆ. ಗ್ರಾಹಕರ ಹಿತರಕ್ಷಣೆ ಮತ್ತು ವ್ಯಾಪಾರದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದಿದೆ.
