ಬೆಂಗಳೂರು, ಅ. 19: 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗಾಗಿ ರೂಪಿಸಿರುವ ‘ಮರ್ಜಿ ಬೈ ಪ್ರೈಮಸ್’ (Marzi by Primus) ಜೀವನಶೈಲಿ ಮತ್ತು ಸಮುದಾಯ ವೇದಿಕೆಯ ಬ್ರ್ಯಾಂಡ್ ರಾಯಭಾರಿಯಾಗಿ ನಟ, ಉದ್ಯಮಿ ಹಾಗೂ ಫಿಟ್ನೆಸ್ ಆಸಕ್ತ ಸುನೀಲ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ವಯಸ್ಸಾಗುವುದು ಎಂದರೆ ಜೀವನದ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಳ್ಳುವುದಲ್ಲ; ಬದಲಾಗಿ, ಹೆಚ್ಚಿನ ಸ್ವಾತಂತ್ರ್ಯ, ಹೊಸ ಅನುಭವಗಳ ಅನ್ವೇಷಣೆ ಮತ್ತು ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುವ ಹಂತ ಎಂಬ ನಂಬಿಕೆಯೊಂದಿಗೆ ‘ಮರ್ಜಿ’ ಕಾರ್ಯನಿರ್ವಹಿಸುತ್ತಿದೆ. ಹೊಸ ಆಸಕ್ತಿಗಳನ್ನು ಬೆಳೆಸಿಕೊಳ್ಳುವುದು, ಸ್ನೇಹಿತರನ್ನು ಸಂಪಾದಿಸುವುದು, ಪ್ರವಾಸ ಕೈಗೊಳ್ಳುವುದು, ದೈಹಿಕವಾಗಿ ಸಕ್ರಿಯವಾಗಿರುವುದು ಹಾಗೂ ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ಆನಂದಿಸುವಂತೆ ಹಿರಿಯ ವಯಸ್ಸಿನವರನ್ನು ಪ್ರೋತ್ಸಾಹಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಸಮಾನ ಆಸಕ್ತಿ ಹೊಂದಿರುವವರನ್ನು ಒಂದೆಡೆ ಸೇರಿಸಲು ವಿಶೇಷ ಕೂಟಗಳು, ಆಸಕ್ತಿ ಆಧಾರಿತ ಸಮುದಾಯಗಳು, ಸಾಮಾಜಿಕ ಕಾರ್ಯಕ್ರಮಗಳು, ದೈಹಿಕ ಕ್ಷಮತೆಯ ಚಟುವಟಿಕೆಗಳು ಮತ್ತು ಕಲಿಕೆಯ ಅವಕಾಶಗಳನ್ನು ವೇದಿಕೆ ಒದಗಿಸುತ್ತದೆ. ಇದರ ಭಾಗವಾಗಿ ಆರಂಭಿಸಿರುವ ‘ಮರ್ಜಿ ಟ್ರಾವೆಲ್’ ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಗಳನ್ನು ಆಯೋಜಿಸುತ್ತದೆ. ಹೊಸ ಸ್ಥಳಗಳ ಅನ್ವೇಷಣೆ, ಸಾಮೂಹಿಕ ಸಾಹಸಗಳು ಮತ್ತು ಅರ್ಥಪೂರ್ಣ ಸಂಬಂಧಗಳ ಮೂಲಕ ಜನರು ಜೀವನವನ್ನು ಹೆಚ್ಚು ಉತ್ಸಾಹದಿಂದ ಕಳೆಯಲು ಇದು ನೆರವಾಗುತ್ತದೆ.
ಜೀವನದ ಅತ್ಯುತ್ತಮ ದಿನಗಳು ಇನ್ನೂ ಮುಂದಿವೆ
ಸುನೀಲ್ ಶೆಟ್ಟಿ ಅವರನ್ನು ಒಳಗೊಂಡ ಹೊಸ ಜಾಹೀರಾತು ಅಭಿಯಾನದ ಮೂಲಕ ಈ ಸಹಭಾಗಿತ್ವಕ್ಕೆ ಚಾಲನೆ ನೀಡಲಾಗಿದೆ. ತಮ್ಮ ಆಸಕ್ತಿಗಳಿಗೆ ಹೊಂದಿಕೆಯಾಗುವ ಜನರನ್ನು ಭೇಟಿಯಾಗುವುದರಿಂದ ಮತ್ತು ಹೊಸ ಅನುಭವಗಳನ್ನು ಹಂಚಿಕೊಳ್ಳುವುದರಿಂದ ದೊರೆಯುವ ಸಂತೋಷವನ್ನು ಈ ಅಭಿಯಾನ ಬಿಂಬಿಸುತ್ತದೆ.
‘ನಿಮಗೆ ಸೂಕ್ತವೆನಿಸುವ ಸ್ಥಳದಲ್ಲಿರಿ. ಮರ್ಜಿ ಮೀಟ್ಅಪ್ಗಳ ಮೂಲಕ ನಿಮ್ಮಂತಹವರನ್ನೇ ಕಂಡುಕೊಳ್ಳಿ’ ಎಂಬ ಸಂದೇಶದೊಂದಿಗೆ ಜಾಹೀರಾತು ಅಭಿಯಾನ ಮುಕ್ತಾಯಗೊಳ್ಳುತ್ತದೆ.
ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಗೊಂಡಿರುವ ಕುರಿತು ಮಾತನಾಡಿದ ಸುನೀಲ್ ಶೆಟ್ಟಿ, ವಯಸ್ಸು ಎನ್ನುವುದು ವಾಸ್ತವವಾದರೂ, ಹೇಗೆ ಬದುಕಬೇಕು ಎಂಬುದು ವ್ಯಕ್ತಿಯ ಆಯ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
“65ನೇ ವಯಸ್ಸಿನಲ್ಲೂ ನಾನು ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ, ಹೊಸ ಅವಕಾಶಗಳನ್ನು ಅನ್ವೇಷಿಸುತ್ತಿದ್ದೇನೆ, ದೈಹಿಕವಾಗಿ ಸದೃಢವಾಗಿರಲು ಪ್ರಯತ್ನಿಸುತ್ತಿದ್ದೇನೆ ಹಾಗೂ ಹೊಸ ಆಸಕ್ತಿಗಳನ್ನು ಕಂಡುಕೊಳ್ಳುತ್ತಿದ್ದೇನೆ. ತೃಪ್ತಿದಾಯಕ ಜೀವನವೆಂದರೆ ಕೇವಲ ದೈಹಿಕ ಸದೃಢತೆಯಲ್ಲ. ಸ್ನೇಹ, ಹಂಚಿಕೊಂಡ ಅನುಭವಗಳು, ಪ್ರವಾಸ ಮತ್ತು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಹೊಸ ಅವಕಾಶಗಳ ಬಗೆಗಿನ ಉತ್ಸಾಹವೂ ಅದರಲ್ಲಿ ಸೇರಿವೆ.
‘ಮರ್ಜಿ’ಯಲ್ಲಿ ನನಗೆ ಇಷ್ಟವಾಗುವ ಅಂಶವೆಂದರೆ, ಜನರು ಹೊಸ ವಿಷಯಗಳನ್ನು ಅನ್ವೇಷಿಸಲು, ಪರಸ್ಪರ ಬೆರೆಯಲು ಮತ್ತು ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ಆನಂದಿಸಲು ಇದು ಪ್ರೋತ್ಸಾಹಿಸುತ್ತದೆ. ಜೀವನದ ಅತ್ಯುತ್ತಮ ದಿನಗಳು ಈಗಾಗಲೇ ಕಳೆದುಹೋಗಿರಬೇಕು ಎಂದೇನಿಲ್ಲ” ಎಂದು ಅವರು ಹೇಳಿದರು.
ವಯಸ್ಸಾಗುವಿಕೆಯ ಕುರಿತ ದೃಷ್ಟಿಕೋನ ಬದಲಾಗಬೇಕು
‘ಮರ್ಜಿ ಬೈ ಪ್ರೈಮಸ್’ ಸಂಸ್ಥಾಪಕ ಆದರ್ಶ್ ನರಹರಿ ಮಾತನಾಡಿ, ಭಾರತದಲ್ಲಿ ವಯಸ್ಸಾಗುವುದನ್ನು ಸಾಮಾನ್ಯವಾಗಿ ಚಟುವಟಿಕೆಗಳ ಇಳಿಕೆ, ಇತರರ ಮೇಲಿನ ಅವಲಂಬನೆ ಮತ್ತು ನಿವೃತ್ತಿಯೊಂದಿಗೆ ಗುರುತಿಸಲಾಗುತ್ತದೆ. ಆದರೆ, ಈ ಹಂತವು ಸ್ವಾತಂತ್ರ್ಯ, ಹೊಸ ಅನುಭವಗಳು ಮತ್ತು ಹೊಸ ಆರಂಭಗಳಿಗೆ ಅವಕಾಶ ಕಲ್ಪಿಸಬೇಕು ಎಂಬುದು ತಮ್ಮ ನಂಬಿಕೆ ಎಂದು ತಿಳಿಸಿದರು.
“‘ಮರ್ಜಿ’ ಮೂಲಕ ಜನರು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು, ಪ್ರವಾಸ ಕೈಗೊಳ್ಳಲು, ಹೊಸ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಹಾಗೂ ಹೆಚ್ಚು ತೃಪ್ತಿದಾಯಕ ಜೀವನ ನಡೆಸಲು ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ. ದೈಹಿಕ ಸದೃಢತೆಯ ಬಗೆಗಿನ ಬದ್ಧತೆ, ಹೊಸತನವನ್ನು ಸ್ವೀಕರಿಸುವ ಗುಣ ಮತ್ತು ಜೀವನೋತ್ಸಾಹದ ಮೂಲಕ ಸುನೀಲ್ ಶೆಟ್ಟಿ ಅವರು ನಮ್ಮ ಆಶಯವನ್ನು ಪ್ರತಿಬಿಂಬಿಸುತ್ತಾರೆ. ಭಾರತದ ‘ಜನರೇಷನ್ ಎವರ್ಗ್ರೀನ್’ ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸಲು ಪ್ರೇರಣೆ ನೀಡುವ ಉದ್ದೇಶದೊಂದಿಗೆ ಅವರು ಕೈಜೋಡಿಸಿರುವುದು ಸಂತಸದ ಸಂಗತಿ” ಎಂದು ಹೇಳಿದರು.
ಈ ಸಹಭಾಗಿತ್ವವು ಭಾರತದಲ್ಲಿ ವಯಸ್ಸಾಗುವಿಕೆಯ ಕುರಿತ ಸಾಂಪ್ರದಾಯಿಕ ದೃಷ್ಟಿಕೋನವನ್ನು ಬದಲಾಯಿಸುವ ‘ಮರ್ಜಿ’ಯ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಲಿದೆ. ಆರೋಗ್ಯ ರಕ್ಷಣೆ ಮತ್ತು ನಿವೃತ್ತಿಗೆ ಮಾತ್ರ ಸೀಮಿತವಾಗದೆ, ಸ್ನೇಹ, ಅನುಭವಗಳು, ಯೋಗಕ್ಷೇಮ ಮತ್ತು ಜೀವನದ ಆನಂದಕ್ಕೂ ಆದ್ಯತೆ ನೀಡುವುದು ಇದರ ಉದ್ದೇಶವಾಗಿದೆ.
‘ಮರ್ಜಿ ಬೈ ಪ್ರೈಮಸ್’ ಕುರಿತು
‘ಮರ್ಜಿ ಬೈ ಪ್ರೈಮಸ್’ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗಾಗಿ ರೂಪಿಸಲಾದ ಡಿಜಿಟಲ್ ಆಧಾರಿತ ಜೀವನಶೈಲಿ ಹಾಗೂ ಸಮುದಾಯ ವೇದಿಕೆಯಾಗಿದೆ. ಸಕ್ರಿಯ ಜೀವನಶೈಲಿ, ಸಾಮಾಜಿಕ ಸಂಪರ್ಕ ಮತ್ತು ಸಮೃದ್ಧ ಅನುಭವಗಳಿಗೆ ಒತ್ತು ನೀಡುವ ಈ ವೇದಿಕೆಯನ್ನು ಆದರ್ಶ್ ನರಹರಿ ಸ್ಥಾಪಿಸಿದ್ದು, ವಿಭಾ ಸಿಂಗಲ್ ಸಹ-ಸ್ಥಾಪಕರಾಗಿದ್ದಾರೆ.
ಸಮಾನ ಆಸಕ್ತಿ ಹೊಂದಿರುವವರನ್ನು ಪರಿಚಯಿಸುವುದು, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ನೆರವಾಗುವುದು ಇದರ ಪ್ರಮುಖ ಉದ್ದೇಶಗಳಾಗಿವೆ. ಇದಕ್ಕಾಗಿ ವಿಶೇಷ ಕೂಟಗಳು, ಸಾಮಾಜಿಕ ಕಾರ್ಯಕ್ರಮಗಳು, ‘ಮರ್ಜಿ ಟ್ರಾವೆಲ್’ ಮತ್ತು ವಿವಿಧ ಜೀವನಶೈಲಿ ಸೇವೆಗಳನ್ನು ಒದಗಿಸಲಾಗುತ್ತಿದೆ.
ಭಾರತದಲ್ಲಿ ಹಿರಿಯ ವಯಸ್ಸಿನವರ ಜೀವನಶೈಲಿಯನ್ನು ಪರಿವರ್ತಿಸುವ ಉದ್ದೇಶದಿಂದ ‘ಮರ್ಜಿ’ಗೆ ‘ಜನರಲ್ ಕ್ಯಾಟಲಿಸ್ಟ್’ ಮತ್ತು ನಿಖಿಲ್ ಕಾಮತ್ ಅವರಿಂದ 2 ಕೋಟಿ ಅಮೆರಿಕನ್ ಡಾಲರ್ (20 ಮಿಲಿಯನ್ ಡಾಲರ್) ಮೊತ್ತದ ಆರಂಭಿಕ ಹೂಡಿಕೆ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ.
