ಕೆ.ಆರ್.ಪೇಟೆ, ಅ.19: ಮನ್ಮುಲ್ ನಿರ್ದೇಶಕ ಡಾಲು ರವಿ ಅವರು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆದಿಲ್ಲ. ಹೀಗಿರುವಾಗ ಜೆಡಿಎಸ್ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್ ಟೀಕಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಡಾಲು ರವಿ ತಮ್ಮ ಬೆಂಬಲಿಗರ ಸಭೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಇಂತಹ ಘಟನೆಗಳು ಮರುಕಳಿಸಿದರೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಅವರ ಮನೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಎಚ್.ಟಿ.ಮಂಜಣ್ಣ ಹಾಗೂ ಪಕ್ಷದ ಮುಖಂಡರನ್ನು ಏಕವಚನದಲ್ಲಿ ಟೀಕಿಸುವುದನ್ನು ಸಹಿಸುವುದಿಲ್ಲ. ಡಾಲು ರವಿ ಅವರಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಜವಾಬ್ದಾರಿ ನೀಡಲಾಗಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಿಸಲಿ ಎಂದು ಹೇಳಿದರು.

ಟಿಎಪಿಸಿಎಂಎಸ್, ಪಿಎಲ್ಡಿ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದವರು ಜೆಡಿಎಸ್ ಕಾರ್ಯಕರ್ತ ಎಂದು ಹೇಳಿಕೊಳ್ಳುವುದು ಯಾವ ನೈತಿಕತೆ ಎಂದು ಪ್ರಶ್ನಿಸಿದ ಅವರು, ಮಂಜಣ್ಣ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ ಎಂಬ ಸವಾಲಿಗೆ ಪ್ರತಿಯಾಗಿ, ಡಾಲು ರವಿ ಮೊದಲು ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ. ಅವರನ್ನು ಸೋಲಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಟಿ.ಮಂಜಣ್ಣ ಅವರೇ ಜೆಡಿಎಸ್ ಅಭ್ಯರ್ಥಿಯಾಗಲಿದ್ದು, ಅವರನ್ನು ಮತ್ತೊಮ್ಮೆ ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಧೈರ್ಯವಿದ್ದರೆ ಅವರ ಗೆಲುವನ್ನು ತಡೆಯಲಿ ಎಂದು ಮೋಹನ್ ಹೇಳಿದರು.
ಡಾಲು ರವಿ ವಿರುದ್ಧ ಮುಖಂಡರ ವಾಗ್ದಾಳಿ
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಲದೇವ್ ಮಾತನಾಡಿ, ಸಹಕಾರ ಸಂಘಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರ ಬಗ್ಗೆ ಅವಹೇಳನಕಾರಿ ಭಾಷೆ ಬಳಸುವುದು ಸರಿಯಲ್ಲ. ಪಕ್ಷದ ಕಾರ್ಯಕರ್ತರನ್ನು ಇದೇ ರೀತಿ ಟೀಕಿಸಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿಂಧುಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಐ.ಗಿರೀಶ್, ಡಾಲು ರವಿ ಅವರ ಆದಾಯದ ಮೂಲ ಮತ್ತು ಆಸ್ತಿ ಗಳಿಕೆಯ ಕುರಿತು ಪ್ರಶ್ನೆಗಳನ್ನು ಎತ್ತಿದರು. ಶಾಸಕರ ಜಲ್ಲಿ ಕ್ರಷರ್ ಕಾನೂನುಬದ್ಧವಾಗಿ ನಡೆಯುತ್ತಿದೆ ಎಂದು ಹರಳಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೈರಾಪುರ ಹರೀಶ್ ಸಮರ್ಥಿಸಿಕೊಂಡು, ಅಕ್ರಮದ ಆರೋಪಗಳಿದ್ದರೆ ದಾಖಲೆಗಳನ್ನು ನೀಡಲಿ ಅಥವಾ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ಐಕನಹಳ್ಳಿಕೊಪ್ಪಲು ದೇವೇಗೌಡ ಅವರು ತಮ್ಮ ಪತ್ನಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವ ಹಾಲು ಉತ್ಪಾದಕರ ಡೇರಿಯ ಹಣಕಾಸಿನ ವ್ಯವಹಾರಗಳ ಕುರಿತು ಸಹಕಾರ ಕಾಯ್ದೆಯಡಿ ತನಿಖೆ ನಡೆಯುತ್ತಿದೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ಸತ್ಯ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಶಾಸಕ ಮಂಜಣ್ಣ ಹಾಗೂ ಪಕ್ಷದ ಮುಖಂಡರ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. 2028ರಲ್ಲಿ ಮಂಜಣ್ಣ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಮೈತ್ರಿ ಸರ್ಕಾರದಲ್ಲಿ ಸಚಿವರನ್ನಾಗಿಸುವ ಸಂಕಲ್ಪ ಮಾಡಿದ್ದೇವೆ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ನಾಗರಘಟ್ಟ ದಿಲೀಪ್ಕುಮಾರ್ ಮಾತನಾಡಿ, ಡಾಲು ರವಿ ಮೊದಲು ತಮ್ಮ ರಾಜಕೀಯ ನಿಲುವು ಹಾಗೂ ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಮೊದಲು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿ ತೋರಿಸಲಿ ಎಂದು ಸವಾಲು ಹಾಕಿದರು.
ಸಭೆಯಲ್ಲಿ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಮೆಣಸ ಮಹದೇವೇಗೌಡ, ರೈತ ಮೋರ್ಚಾ ಅಧ್ಯಕ್ಷ ಹುಲ್ಲೇಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಕಾಯಿ ಮಂಜೇಗೌಡ, ಹಿರಿಯ ಮುಖಂಡರಾದ ಬೇಲದಕೆರೆ ನಂಜಪ್ಪ, ಬಲ್ಲೇನಹಳ್ಳಿ ರಾಮಚಂದ್ರನ್, ವಿ.ಎಸ್. ಧನಂಜಯ್ಕುಮಾರ್, ಪೂವನಹಳ್ಳಿ ರೇವಣ್ಣ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
