ಚನ್ನರಾಯಪಟ್ಟಣ: ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮರಾಣಿ ಅವರು ಪಟ್ಟಣದ ಪೌರಕಾರ್ಮಿಕರು, ನೀರುಗಂಟಿಗಳು ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಚಾಲಕರು ಮತ್ತು ಸಹಾಯಕರಿಗೆ ನಗದು ಹಾಗೂ ಸಿಹಿ ವಿತರಿಸಿ ಗೌರವಿಸಿದರು.
ಪಟ್ಟಣದಲ್ಲಿರುವ ಶಾಸಕರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರತ ಪೌರಕಾರ್ಮಿಕರಿಗೆ ಹಬ್ಬದ ಉಡುಗೊರೆ ನೀಡಿ ಶುಭಾಶಯ ಕೋರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ಪಟ್ಟಣವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ನಗರ ಸ್ವಚ್ಛ ಹಾಗೂ ಸುಂದರವಾಗಿ ಕಾಣಲು ಅವರ ನಿಸ್ವಾರ್ಥ ಸೇವೆಯೇ ಪ್ರಮುಖ ಕಾರಣವಾಗಿದೆ ಎಂದು ಪ್ರಶಂಸಿಸಿದರು.

ಪೌರಕಾರ್ಮಿಕರು ದಸರಾ ಹಬ್ಬವನ್ನು ಸಂತೋಷದಿಂದ ಆಚರಿಸಲಿ ಎಂಬ ಉದ್ದೇಶದಿಂದ ತಮ್ಮ ಎರಡು ತಿಂಗಳ ಸಂಬಳದ ಹಣವನ್ನು ಅವರಿಗೆ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ನಗದು ಹಾಗೂ ಸಿಹಿ ವಿತರಿಸಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮರಾಣಿ, ಟಿಎಪಿಸಿಎಂಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ಮಾಜಿ ಅಧ್ಯಕ್ಷ ಅನಿಲ್ ಮರಗೂರು, ಪುರಸಭೆಯ ಮಾಜಿ ಅಧ್ಯಕ್ಷ ಕೋಟೆ ಮೋಹನ್, ಜೆಡಿಎಸ್ ಮುಖಂಡರಾದ ಮೇಘಲಕೇರಿ ಗಾರೆಕೃಷ್ಣ, ವಳಗೆರೆಹಳ್ಳಿ ಮಂಜಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
