ಚಿತ್ರಶೀರ್ಷಿಕೆ:21.ಕೆ.ಆರ್.ಪಿ-03: ಕೆ.ಆರ್.ಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿದರು.
ಕೆ.ಆರ್.ಪೇಟೆ,ಅ.21: ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘವು ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ರೈತರು ಮಂಡ್ಯದ ಗಣಂಗೂರು ಟೋಲ್ ಬಳಿ ಹೆದ್ದಾರಿ ಬಂದ್ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ ಈ ಪ್ರತಿಭಟನೆಗೆ ತಾಲ್ಲೂಕಿನ ಎಲ್ಲಾ ಕಬ್ಬು ಬೆಳೆಗಾರರು ಹಾಗೂ ಹಾಲು ಉತ್ಪಾದಕರು ಹಾಗೂ ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಗನೆಗಳು ರೈತ ಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಬೃಹತ್ ರಸ್ತೆ ತಡೆ ಚಳುವಳಿಯನ್ನು ಯಶಸ್ವಿಗೊಳಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮನವಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಕಾರ್ಯಕರ್ತರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಅವರು ಇವತ್ತು ನಾಡಿನ ಅನ್ನದಾತ ಬೀದಿಗೆ ಬಂದು ನಿಲ್ಲುವ ಅನಿವಾರ್ಯತೆ ಎದುರಾಗಿದೆ. ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣ ಕರ್ನಾಟಕದವರೆಗೂ ಕಬ್ಬು ಬೆಳೆಗಾರರು ತಮ್ಮ ಹಕ್ಕಿಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ಸಕ್ಕರೆ ಕಾರ್ಖಾನೆಗಳು ಪ್ರಭಾವಿಗಳ ಹಿಡಿತದಲ್ಲಿವೆ, ಅದಕ್ಕಾಗಿಯೇ ರೈತರ ಕಬ್ಬಿನ ಬಾಕಿ ಹಣ ಕೊಡಿಸಲು ಸರ್ಕಾರಗಳಿಗೆ ಧೈರ್ಯ ಸಾಲುತ್ತಿಲ್ಲ. ಪಕ್ಕದ ತಮಿಳುನಾಡು ರಾಜ್ಯವು 9 ಪಾಯಿಂಟ್ ಇಳುವರಿಗೆ ಕಬ್ಬಿಗೆ 800ರೂ ಪ್ರೋತ್ಸಾಹ ದನ ಹೆಚ್ಚುವರಿಯಾಗಿ ಕೊಡುತ್ತಿದೆ. ನಮ್ಮ ಕರ್ನಾಟಕದ ರೈತರಿಗೆ ಕಬ್ಬಿಗೆ ನ್ಯಾಯಯುತ ಬೆಲೆ ನೀಡುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ 5,500 ದರ ನಿಗದಿ ಮಾಡಲೇಬೇಕು.

ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಪ್ರತಿಯೊಂದು ರೂಪಾಯಿಯನ್ನೂ ತಕ್ಷಣವೇ ರೈತರ ಖಾತೆಗೆ ಜಮೆ ಮಾಡಬೇಕು. ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು. ಹಾಲಿನ ದರವನ್ನು 8ರೂ ಹೆಚ್ಚಿಸಲು ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದ್ದು ಇದನ್ನು ಹಾಲು ಉತ್ಪಾದಕರಿಗೇನೆ ನೀಡಬೇಕು ಎಂಬಿತ್ಯಾದಿ ನ್ಯಾಯಯುತ ಹಕ್ಕೊತ್ತಾಯವನ್ನು ಮುಂದಿಟ್ಟುಕೊಂಡು, ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಅಕ್ಟೋಬರ್ 23 ರಂದು ಮಂಡ್ಯದ ಗಣಂಗೂರು ಟೋಲ್ ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಕರೆ ನೀಡಲಾಗಿದೆ.
ಈ ಹೋರಾಟ ಕೇವಲ ರೈತ ಸಂಘದ್ದಲ್ಲ, ಇದು ಇಡೀ ಕೋಟ್ಯಾಂತರ ಅನ್ನದಾತರ ಅಸ್ತಿತ್ವದ ಪ್ರಶ್ನೆಯಾಗಿದೆ ಹಾಗಾಗಿ ಅ.23 ರಂದು ಗಣಂಗೂರು ಟೋಲ್ ಬಳಿ ಹೆದ್ದಾರಿ ಬಂದ್ನಲ್ಲಿ ಕಬ್ಬು ಬೆಳೆಗಾರರು, ಹಾಲು ಉತ್ಪಾದಕರು, ರೈತ ಬಾಂಧವರು ಹಾಗೂ ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ರೈತ ಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕಾರಿಗನಹಳ್ಳಿ ಪುಟ್ಟೇಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಬೂಕನಕೆರೆ ಅಂಗಡಿ ನಾಗರಾಜು, ಹಿರಿಯ ರೈತ ಮುಖಂಡರಾದ ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಕರೋಠಿ ತಮ್ಮಯ್ಯ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಚೌಡೇನಹಳ್ಳಿ ಪುಟ್ಟೇಗೌಡ, ಹಿರೀಕಳಲೆ ಬಸವರಾಜು, ಮೊಸಳೇಕೊಪ್ಪಲು ರವಿ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
