ಕೆ.ಆರ್.ಪೇಟೆ,ಅ.21: ರಾಜ್ಯ ಸರ್ಕಾರ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯ ಚುನಾವಣೆ ಮೀಸಲಾತಿಯ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ ಆಕಾಂಕ್ಷಿಗಳು ಪಕ್ಷದ ವರಿಷ್ಠರ ಮನೆ ಬಾಗಿಲಿಗೆ ದೌಡಾಯಿಸುತ್ತಿದ್ದು, ನನಗೆ ಟಿಕೆಟ್ ನೀಡುವಂತೆ ಲಾಭಿ ಮಾಡುವಲ್ಲಿ ನಿರತರಾಗಿದ್ದಾರೆ.
ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರವು ಈಗಾಗಲೇ ಕ್ಷೇತ್ರವಾರು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಒಟ್ಟು ಸ್ಥಾನಗಳ ಸಂಖ್ಯೆ ಹಾಗೂ ವರ್ಗವಾರು ಮೀಸಲಾತಿ ಅಧಿಸೂಚನೆಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಿದೆ. ಕಳೆದ ಹತ್ತು ವರ್ಷಗಳಿಂದ ಬಾಕಿಯಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು 2027ರ ಜನವರಿ ಮೊದಲ ವಾರದಲ್ಲಿ ನಡೆಸಲು ರಾಜ್ಯ ಸರ್ಕಾರ ಮಹತ್ವದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಜನಪ್ರತಿನಿಧಿಗಳೇ ಇಲ್ಲದೆ 5ವರ್ಷಗಳು ಮುಗಿಸಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಬಹುತೇಕ ಜನವರಿ ತಿಂಗಳ ಮೊದಲ ವಾರದಲ್ಲಿ ಚುನಾವಣೆ ನಡೆಸಲು ರಾಜ್ಯ ಸಚಿವ ಸಂಪುಟ ಬಯಸಿದೆ. ಆ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ.
ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸದ ಕಾರಣ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಸ್ಥಗಿತವಾಗಿದ್ದು, ಪಂಚಾಯಿತಿಗಳಲ್ಲಿ ಅಭಿವೃದ್ಧಿಗೆ ಹಣ ಇಲ್ಲದಂತಾಗಿದೆ. ಈಗಾಗಲೇ ಐದಾರು ವರ್ಷಗಳು ಕಳೆದುಹೋಗಿದ್ದು, ಈಗಲೂ ಚುನಾವಣೆ ನಡೆಸದಿದ್ದರೆ ಸರ್ಕಾರಕ್ಕೆ ಗೌರವ ಬರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಹಾಗಾಗಿ, ಮೊದಲಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿ, ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಸುಳಿವು ನೀಡಿದೆ.
2ತಿಂಗಳಷ್ಟೇ ಬಾಕಿ: ಡಿಸೆಂಬರ್ ನಲ್ಲ್ಲಿ ಅಧಿಸೂಚನೆ ಹೊರಡಿಸಿ ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ತಾಲ್ಲೂಕಿನ 20 ತಾಲೂಕು ಪಂಚಾಯಿತಿ ಹಾಗೂ 6 ಜಿಲ್ಲಾ ಪಂಚಾಯಿತಿಗಳ ಕ್ಷೇತ್ರಗಳಲ್ಲಿ ಸ್ಥಳೀಯ ಸಮರಕ್ಕೆ (ಲೋಕಲ್ ಫೈಟ್) ಇನ್ನು 2 ತಿಂಗಳು ಮಾತ್ರ ಬಾಕಿ ಇದೆ. ಮೀಸಲಾತಿ ಪಟ್ಟಿ ಪ್ರಕಟಗೊಂಡಿರುವ ಹಿನ್ನೆಲೆಯಲ್ದಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಲಿವೆ.

ಪಕ್ಷದ ವರಿಷ್ಠರ ಮನೆ ಬಾಗಿಲಿಗೆ ದೌಡು:
ಟಿಕೆಟ್ ಆಕಾಂಕ್ಷಿಗಳ ಗೆಲುವು, ಸೋಲುವ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳು ಪಕ್ಷದ ನಾಯಕರ ಮನೆ ಬಾಗಿಲಿಗೆ ಧಾವಿಸಿ ತಮಗೆ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಲು ಇಚ್ಚಿಸುವ ಆಕಾಂಕ್ಷಿತ ಅಭ್ಯರ್ಥಿಗಳು ಶಾಸಕರಾದ ಹೆಚ್.ಟಿ.ಮಂಜು ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್ ಅವರ ಮನೆ ಬಾಗಿಲಿಗೆ ಹೋಗಿ ತಮಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಇನ್ನು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲು ಇಚ್ಚಿಸುವ ಆಕಾಂಕ್ಷಿಗಳು ಮಾಜಿ ಸಚಿವ ನಾರಾಯಣಗೌಡರ ಮನೆ ಬಾಗಿಲಿಗೆ ಹೋಗಿ ತಮಗೆ ಈ ಭಾರಿ ಬಿ.ಫಾರಂ ಕೊಡಿಸಿ ಸ್ಪರ್ಧೆಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಇಚ್ಚಿಸುವ ಆಕಾಂಕ್ಷಿಗಳು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು, ವಿಜಯ್ ರಾಮೇಗೌಡ, ಕಿಕ್ಕೇರಿ ಸುರೇಶ್, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಇತರೆ ಕಾಂಗ್ರೆಸ್ ನಾಯಕರುಗಳು ಮನೆ ಬಾಗಿಲಿಗೆ ಹೋಗಿ ತಮಗೆ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ದುಂಬಾಲು ಬೀಳುತ್ತಿದ್ದಾರೆ. ಆದರೆ ತಾಲ್ಲೂಕಿನ ಎಲ್ಲಾ ಪಕ್ಷಗಳ ವರಿಷ್ಠರುಗಳು ಎಲ್ಲಾ ಆಕಾಂಕ್ಷಿತರ ಪಟ್ಟಿ ಮಾಡಿಕೊಳ್ಳುತ್ತಿದ್ದು, ಅಳೆದು ತೂಗು ಯಾರಿಗೆ ಯಾವ ಕ್ಷೇತ್ರದಿಂದ ಬಿ.ಫಾರಂ ನೀಡಿದರೆ ತಮ್ಮ ಪಕ್ಷವು ಗೆಲುವಿಗೆ ಸಹಕಾರಿಯಾಗಲಿದೆ ಎಂದು ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ.
ಕೆ.ಆರ್.ಪೇಟೆ ತಾ.ಪಂ.ಕ್ಷೇತ್ರವಾರು ಮೀಸಲಾತಿ ಪಟ್ಟಿ ಪ್ರಕಟ:
20 ಕ್ಷೇತ್ರಗಳ ತಾತ್ಕಾಲಿಕ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ವಿವರ ಈ ಕೆಳಕಂಡಂತಿದೆ.
01-ಆನೆಗೊಳ – ಹಿಂದುಳಿದ ವರ್ಗ “ಎ” ವರ್ಗ (ಮಹಿಳೆ), 02-ಕಿಕ್ಕೇರಿ – ಹಿಂದುಳಿದ “ಎ” ವರ್ಗ (ಮಹಿಳೆ), 03-ಚೌಡೇನಹಳ್ಳಿ – ಹಿಂದುಳಿದ “ಬಿ” ವರ್ಗ, 04-ಏಕನಹಳ್ಳಿ – ಹಿಂದುಳಿದ “ಎ” ವರ್ಗ, 05-ಸಂತೇಬಾಚಹಳ್ಳಿ – ಸಾಮಾನ್ಯ (ಮಹಿಳೆ), 06-ಸಾರಂಗಿ – ಸಾಮಾನ್ಯ (ಮಹಿಳೆ), 07-ಅಗ್ರಹಾರಬಾಚಹಳ್ಳಿ – ಸಾಮಾನ್ಯ, 08-ಹಿರಿಕಳಲೆ – ಸಾಮಾನ್ಯ, 09-ಬಂಡಿಹೊಳೆ – ಅನುಸೂಚಿತ ಜಾತಿ, 10-ಹರಿಹರಪುರ – ಸಾಮಾನ್ಯ, 11-ಮಂದಗೆರೆ – ಸಾಮಾನ್ಯ, 12-ಬೀರುವಳ್ಳಿ – ಹಿಂದುಳಿದ ವರ್ಗ “ಎ” ವರ್ಗ, 13-ಅಕ್ಕಿಹೆಬ್ಬಾಳು – ಎಸ್.ಟಿ. (ಮಹಿಳೆ), 14-ಸೋಮನಹಳ್ಳಿ – ಸಾಮಾನ್ಯ, 15-ಸಿಂಧಘಟ್ಟ – ಸಾಮಾನ್ಯ, 16-ಶೀಳನೆರೆ – ಹಿಂದುಳಿದವರ್ಗ “ಎ” ವರ್ಗ (ಮಹಿಳೆ), 17-ತೆಂಡೇಕೆರೆ – ಎಸ್.ಸಿ. (ಮಹಿಳೆ), 18-ಬೂಕನಕೆರೆ – ಸಾಮಾನ್ಯ (ಮಹಿಳೆ), 19-ವಿರಲಾಪುರ – ಎಸ್.ಸಿ (ಮಹಿಳೆ), 20-ಗಂಜಿಗೆರೆ – ಸಾಮಾನ್ಯ-ಮಹಿಳೆಗೆ ಮೀಸಲಾಗಿರುತ್ತದೆ.
ಜಿಲ್ಲಾ ಪಂಚಾಯಿತಿ ಮೀಸಲಾತಿ: ಹಿರೀಕಳಲೆ (ಕಸಬಾ) ಜಿ.ಪಂ: ಪರಿಶಿಷ್ಟ ಜಾತಿ , ಸಂತೇಬಾಚಹಳ್ಳಿ ಜಿ.ಪಂ: ಬಿಸಿಎಂ.ಎ.ಮಹಿಳೆ, ಶೀಳನೆರೆ ಜಿ.ಪಂ. ಬಿಸಿಎಂ.ಎ, ಬೂಕನಕೆರೆ : ಸಾಮಾನ್ಯ : ಅಕ್ಕಿಹೆಬ್ಬಾಳು: ಪರಿಶಿಷ್ಟ ಪಂಗಡ ಮಹಿಳೆ, ಕಿಕ್ಕೇರಿ: ಸಾಮಾನ್ಯ ಮಹಿಳೆಗೆ ಮೀಸಲಾಗಿವೆ.
ಕಾಣೆಯಾದ 4ತಾ.ಪಂ.ಕ್ಷೇತ್ರಗಳು: ಈ ಹಿಂದೆ ಒಟ್ಟು 24ತಾಲ್ಲೂಕು ಪಂಚಾಯತ್ ಕ್ಷೇತ್ರಗಳಿದ್ದವು. ಈಗ ಮುರುಕನಹಳ್ಳಿ, ಬಲ್ಲೇನಹಳ್ಳಿ, ಆಲಂಬಾಡಿಕಾವಲು, ಮಾಕವಳ್ಳಿ ತಾಲ್ಲೂಕು ಪಂಚಾಯತ್ ಕ್ಷೇತ್ರಗಳು ರದ್ದಾಗಿದ್ದು, 20ಕ್ಷೇತ್ರಗಳು ಮಾತ್ರ ಉಳಿದಿವೆ.
ಇನ್ನು ಇದೇ ಅ.19ರವರೆಗೆ ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು. ಒಂದೆರಡು ಕ್ಷೇತ್ರಗಳ ಮೀಸಲಾತಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂಬುದು ವಿವಿಧ ಪಕ್ಷಗಳ ಮುಖಂಡರ ಅನಿಸಿಕೆಯಾಗಿದ್ದು, ಬಹುತೇಕ ಈ ಪ್ರಕಟಗೊಂಡಿರುವ ತತ್ಕಾಲಿಕ ಮೀಸಲಾತಿಯೇ ಅಂತಿಮವಾಗುವ ಲಕ್ಷಣಗಳಿವೆ.
* ವರದಿ:ಶ್ರೀನಿವಾಸ್. ಆರ್.
