ರಾಮನಾಥಪುರ, ಅ.25: ಈ ದೇಶದಲ್ಲಿ ಹುಟ್ಟಿದವರೆಲ್ಲರೂ ಹಿಂದೂಗಳು. ಶಾಂತಿ ಮತ್ತು ಶಿಸ್ತು ನಮ್ಮ ಸಂಘಟನೆಯ ಧ್ಯೇಯವಾಗಿದ್ದು, ನಮ್ಮ ನಡವಳಿಕೆ ಇತರರಿಗೆ ಮಾದರಿಯಾಗಿರಬೇಕು ಎಂಬ ಎಚ್ಚರ ಸದಾ ನಮ್ಮನ್ನು ಜಾಗೃತಗೊಳಿಸಲಿ ಎಂದು ಗ್ರಾಮ ವಿಕಾಸ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ ಹೊ.ಸು. ರಮೇಶ್ ತಿಳಿಸಿದರು.
ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಆವರಣದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರಾರು ಕಾರ್ಯಕರ್ತರು ಗಣವೇಷ ಧರಿಸಿ ಪಥಸಂಚಲನ ನಡೆಸಿದರು. ಘೋಷ್ ವಾದ್ಯ, ಪೂರ್ಣಕುಂಭ ಹಾಗೂ ಭಾರತ ಮಾತೆಯ ಭಾವಚಿತ್ರದೊಂದಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಶಿಸ್ತಿನಿಂದ ಹೆಜ್ಜೆ ಹಾಕಿದ ಸ್ವಯಂಸೇವಕರು ಶ್ರೀ ಪಟ್ಟಾಭಿರಾಮ ಗ್ರಾಮಾಂತರ ಪ್ರೌಢಶಾಲೆಯ ಆವರಣಕ್ಕೆ ಆಗಮಿಸಿದರು. ಬಳಿಕ ನಡೆದ ಸಭೆಯಲ್ಲಿ ಹೊ.ಸು. ರಮೇಶ್ ಮಾತನಾಡಿದರು.

ನೂರು ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಆರ್ಎಸ್ಎಸ್ ಸ್ವಯಂಸೇವಕರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಸನ್ಯಾಸಿಗಳು ಮತ್ತು ಮಠಾಧಿಪತಿಗಳು ಒಗ್ಗೂಡಿ ಹಿಂದೂ ಸಮಾಜದ ಸಂಸ್ಕಾರಗಳನ್ನು ಉಳಿಸಿ ಬೆಳೆಸಲು ಹಲವು ವಿಚಾರಗಳ ಕುರಿತು ನಿರ್ಣಯಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.
ಸ್ವಯಂಸೇವಕರು ಪ್ರತಿದಿನ ಅಥವಾ ವಾರಕ್ಕೊಮ್ಮೆಯಾದರೂ ಒಂದೆಡೆ ಸೇರಿ ಸಂಘಟಿತರಾಗಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಶಿಸ್ತು, ಸಂಸ್ಕಾರ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು, ಆರ್ಎಸ್ಎಸ್ ತಾಲೂಕು ಸಂಚಾಲಕ ಸೀಬಹಳ್ಳಿ ಸೋಮಶೇಖರ್, ಹೋಬಳಿ ಕಾರ್ಯವಾಹ ದಿಲೀಪ್, ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕ ಕನಕಾಚಾರ್ಯ ಸೇರಿದಂತೆ ಹಲವು ಗಣ್ಯರು ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
