ರಾಮನಾಥಪುರ: ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಎ. ಮಂಜು ಅವರ ಧರ್ಮಪತ್ನಿ ತಾರಾಮಂಜು ಕರೆ ನೀಡಿದರು.
ರಾಮನಾಥಪುರ ಹೋಬಳಿಯ ಶಾಸಕ ಎ. ಮಂಜು ಅವರ ಸ್ವಗ್ರಾಮ ಹನ್ಯಾಳಿನ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ‘ಮಕ್ಕಳ ಮನೆ’ ಪೂರ್ವ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮಕ್ಕೆ ಭೇಟಿ ನೀಡಿ, ತಾಲ್ಲೂಕಿನ ಮಕ್ಕಳ ಮನೆ ಶಿಕ್ಷಕಿಯರೊಂದಿಗೆ ಸಂವಾದ ನಡೆಸಿದ ಬಳಿಕ ಅವರು ಮಾತನಾಡಿದರು.
ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಹನ್ಯಾಳು ಹಿರಿಯ ವಿದ್ಯಾರ್ಥಿಗಳ ಬಳಗವು ಸಾಮಾಜಿಕ ಹೊಣೆಗಾರಿಕೆ ಮತ್ತು ಸಮುದಾಯದ ಸಹಭಾಗಿತ್ವಕ್ಕೆ ಉತ್ತಮ ಮಾದರಿಯಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈ ಬಳಗ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದ್ದು, ಇಂತಹ ಪ್ರಯತ್ನಗಳು ರಾಜ್ಯದ ಇತರ ಭಾಗಗಳಿಗೂ ಪ್ರೇರಣೆಯಾಗಬೇಕು ಎಂದರು.
ಅರಕಲಗೂಡು ತಾಲ್ಲೂಕಿನಾದ್ಯಂತ ಸಾಮಾಜಿಕ ಕಳಕಳಿಯ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಹಿರಿಯ ವಿದ್ಯಾರ್ಥಿಗಳ ಬಳಗವು ಇದೀಗ ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಗ್ರಾಮೀಣ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಅವರ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

20ಕ್ಕೂ ಹೆಚ್ಚು ಶಾಲೆಗಳಿಗೆ ವಿಸ್ತರಿಸಿದ ಮಕ್ಕಳ ಮನೆ ಯೋಜನೆ
ಶಾಸಕ ಎ. ಮಂಜು ಅವರ ಜನ್ಮದಿನದ ಅಂಗವಾಗಿ 2023ರಲ್ಲಿ ಹನ್ಯಾಳು ಸರ್ಕಾರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಬಳಗವು ‘ಮಕ್ಕಳ ಮನೆ’ ಪೂರ್ವ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸಿತು. ಈ ಯೋಜನೆ ಇಂದು ಅರಕಲಗೂಡು ತಾಲ್ಲೂಕಿನ 20ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ವಿಸ್ತರಿಸಿದ್ದು, 527ಕ್ಕೂ ಅಧಿಕ ಗ್ರಾಮೀಣ ಮಕ್ಕಳಿಗೆ ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣ ಒದಗಿಸುತ್ತಿದೆ.
ಈ ವಿನೂತನ ಪ್ರಯತ್ನವು ಗ್ರಾಮೀಣ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಶಿಕ್ಷಣದ ಭದ್ರ ಬುನಾದಿ ಕಲ್ಪಿಸುವುದರ ಜತೆಗೆ, ಹಿರಿಯ ವಿದ್ಯಾರ್ಥಿಗಳು ಹಾಗೂ ಯುವಜನತೆ ತಮ್ಮೂರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರಣೆ ನೀಡಿದೆ.
ಶಾಸಕ ಎ. ಮಂಜು ಅವರ ಜನ್ಮದಿನದ ಸಂದರ್ಭದಲ್ಲಿ ಅವರು ಓದಿದ ಸ್ವಗ್ರಾಮದ ಶಾಲೆಗೆ ಹಿರಿಯ ವಿದ್ಯಾರ್ಥಿಗಳ ಬಳಗವು ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣದ ವ್ಯವಸ್ಥೆ ಕಲ್ಪಿಸಿರುವುದು ತಾಲ್ಲೂಕಿಗೆ ಮಾದರಿಯಾಗಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ, ಅವುಗಳ ಗುಣಮಟ್ಟವನ್ನು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಬೆಳೆಸುವ ನಿಟ್ಟಿನಲ್ಲಿ ಬಳಗದ ಪ್ರಯತ್ನ ಮಹತ್ವದ್ದಾಗಿದೆ ಎಂದು ತಾರಾಮಂಜು ತಿಳಿಸಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಾವು ಕೂಡ ಹಲವು ವರ್ಷಗಳಿಂದ ಕೈಲಾದ ಸಹಕಾರ ನೀಡುತ್ತಿದ್ದು, ಜಿಲ್ಲೆಯ ಎಲ್ಲ ಗ್ರಾಮಗಳ ಹಿರಿಯ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿನ ಶಾಲೆಗಳ ಪ್ರಗತಿಗೆ ನೆರವಾಗಬೇಕು. ಶಿಕ್ಷಣದ ಅಭಿವೃದ್ಧಿ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಅದು ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯೂ ಆಗಿದೆ. ಹೀಗಾಗಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
– ಕುಮಾರಸ್ವಾಮಿ ಎಂ.ಎನ್.
