ಕೊರಟಗೆರೆ: ಬಾಲ್ಯದ ತುಂಟಾಟ, ಶಾಲಾ ದಿನಗಳ ಸವಿ ನೆನಪು, ಗುರುಗಳ ಮಾರ್ಗದರ್ಶನ ಹಾಗೂ ಸ್ನೇಹಿತರೊಂದಿಗಿನ ಒಡನಾಟವನ್ನು ಮೆಲುಕು ಹಾಕುವ ಮೂಲಕ ಹಳೆಯ ವಿದ್ಯಾರ್ಥಿಗಳು ಸಂಭ್ರಮದಿಂದ ಒಂದೆಡೆ ಸೇರಿದರು.
ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2007-08ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಮ್ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಸುಮಾರು 18 ವರ್ಷಗಳ ಹಿಂದೆ ಶಾಲೆಯ ಮೆಟ್ಟಿಲು ಇಳಿದಿದ್ದ ಹಳೆಯ ವಿದ್ಯಾರ್ಥಿಗಳು ಮತ್ತೊಮ್ಮೆ ಒಂದೆಡೆ ಸೇರಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿ, ಅವರ ಆಶೀರ್ವಾದ ಪಡೆದರು. ಸ್ನೇಹಿತರ ಪುನರ್ಮಿಲನವು ಎಲ್ಲರಲ್ಲೂ ಸಂತಸ ಮೂಡಿಸಿತು.

ಶಾಲೆ ಮತ್ತು ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಸಂಸ್ಕೃತಿ
ಕಾರ್ಯಕ್ರಮದಲ್ಲಿ ಮಾತನಾಡಿದ ನೀಲಗೊಂಡನಹಳ್ಳಿ ಗ್ರಾಮದ ಸರ್ಕಾರಿ ಉದ್ಯೋಗಿ ತಿಮ್ಮರಾಜು, ನಾವು ಕಲಿತ ಶಾಲೆಗೆ ಹಾಗೂ ವಿದ್ಯೆ ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಾಗಿದೆ. ಈ ಸ್ನೇಹ ಸಮ್ಮಿಲನ ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದೆ, ಮುಂದಿನ ದಿನಗಳಲ್ಲಿಯೂ ಶಾಲೆಯ ಪ್ರಗತಿಗೆ ಸಹಕಾರಿಯಾಗಬೇಕು. ಹಳೆಯ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ತಿಳಿಸಿದರು.
ಶಾಲೆ ಬಿಟ್ಟು ಹಲವು ವರ್ಷಗಳು ಕಳೆದಿವೆ. ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಎಲ್ಲರೂ ತಮ್ಮದೇ ಆದ ಜವಾಬ್ದಾರಿಗಳೊಂದಿಗೆ ತೊಡಗಿಸಿಕೊಂಡಿದ್ದೇವೆ. ಆದರೂ ಬಾಲ್ಯದ ತುಂಟಾಟಗಳು, ಗುರುಗಳ ಮಾರ್ಗದರ್ಶನ ಹಾಗೂ ಶಾಲಾ ದಿನಗಳ ಮಧುರ ನೆನಪುಗಳು ಎಂದಿಗೂ ಹಸಿರಾಗಿಯೇ ಉಳಿದಿವೆ. ಆ ಸವಿ ನೆನಪುಗಳನ್ನು ಮತ್ತೊಮ್ಮೆ ಹಂಚಿಕೊಳ್ಳಲು ಮತ್ತು ನಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಈ ಸಮ್ಮಿಲನ ಉತ್ತಮ ವೇದಿಕೆಯಾಗಿದೆ ಎಂದರು.
ಹಳೆಯ ವಿದ್ಯಾರ್ಥಿಗಳ ಈ ಅಪೂರ್ವ ಸಂಗಮವು ಸ್ನೇಹದ ಮಹತ್ವವನ್ನು ಸಾರುವುದರ ಜತೆಗೆ, ಶಾಲೆಯೊಂದಿಗಿನ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಲ್ಲರೂ ಒಗ್ಗಟ್ಟಿನಿಂದ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಆಶಿಸಿದರು.

ಶಿಕ್ಷಕರಿಗೆ ವಿಶೇಷ ಸನ್ಮಾನ
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ವಿ. ಶಂಕ್ರಮ್ಮ (ವಿಎಸ್ಆರ್), ಬಿ.ಆರ್.ಎನ್. ನಾಗರಾಜು, ಕೆಬಿಕೆ ಕಿರಣ್, ಮುಖ್ಯ ಶಿಕ್ಷಕಿ ಜಯಲಕ್ಷ್ಮಮ್ಮ (ಜೆಎಲ್), ಎಸ್.ಎ. ಅನ್ನಪೂರ್ಣ, ಲಕ್ಷ್ಮಮ್ಮ ಹಾಗೂ ನಾಗಲಕ್ಷ್ಮಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೊಡ್ಡಪಾಲನಹಳ್ಳಿ ಕಿರಣ್ ಕುಮಾರ್, ಲೆಕ್ಕಾಧಿಕಾರಿ ಮಂಜುನಾಥ್, ಆರ್ಐ ಪುನೀತ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಾಗೇನಹಳ್ಳಿ ಸರ್ವೇಶ್, ಪೊಲೀಸ್ ಅಧಿಕಾರಿ ಅಳಾಲಸಂದ್ರ ತೇಜಸ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
