ರಾಮನಾಥಪುರ: ತ್ರೇತಾಯುಗದಲ್ಲಿ ವಿಶ್ವಕ್ಕೆ ಮೌಲ್ಯಗಳನ್ನು ಸಾರಿದ, ಶಾಂತಿರಸದಿಂದ ಕೂಡಿದ ಮಹಾನ್ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಿಸುವುದು ಅವರ ಆದರ್ಶ ಮತ್ತು ವಿಚಾರಧಾರೆಗಳನ್ನು ಸ್ಮರಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕೇತವಾಗಿದೆ ಎಂದು ಶ್ರೀ ಶಿವರಾತ್ರಿ ರಾಜೇಂದ್ರ ಭಕ್ತ ಬಳಗದ ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ತಿಳಿಸಿದರು.
ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಭಕ್ತ ಬಳಗ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಭಕ್ತ ಬಳಗದ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ಕೇವಲ ಆದಿಕವಿಯಲ್ಲದೆ, ಸಮಾಜಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ಋಷಿ, ದಾರ್ಶನಿಕ ಹಾಗೂ ಸಮಾಜ ಸುಧಾರಕರಾಗಿದ್ದಾರೆ. ಅವರ ಸಾಹಿತ್ಯ ಮತ್ತು ವಿಚಾರಧಾರೆಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ. ಇಂತಹ ಮಹನೀಯರ ಜಯಂತಿಗಳನ್ನು ಆಚರಿಸುವುದರ ಉದ್ದೇಶ ಅವರ ಜೀವನದ ಮೌಲ್ಯಗಳನ್ನು ಅರಿತು, ಅವುಗಳನ್ನು ನಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ರಾಮಾಯಣದ ಸಂದೇಶಗಳು ಮಾನವೀಯತೆ, ಸನ್ನಡತೆ ಹಾಗೂ ಆದರ್ಶ ಬದುಕಿನ ಮಹತ್ವವನ್ನು ಸಾರುತ್ತವೆ. ಅವರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶರಣೆ ಚೇತನ, ಇಂದಿರಾ, ಶ್ರೀ ವಾಲ್ಮೀಕಿ ಭಕ್ತ ಬಳಗದ ಸದಸ್ಯರಾದ ಶ್ರೀನಿವಾಸ, ರಾಘು, ಹರೀಶ್, ರವಿ, ಸಿದ್ದಯ್ಯ, ಕುಮಾರ್, ಲೋಕೇಶ್, ರಂಗಸ್ವಾಮಿ, ವಿನಯ್, ನಿರಂಜನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಳಬೋಯಿ ಹಾಗೂ ಶ್ರೀ ಶಿವರಾತ್ರಿ ರಾಜೇಂದ್ರ ಭಕ್ತ ಬಳಗದ ಪ್ರಧಾನ ಕಾರ್ಯದರ್ಶಿ ಆರ್.ಕೆ. ಶ್ರೀನಿವಾಸ್ ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹರ್ಷಿ ವಾಲ್ಮೀಕಿಯವರಿಗೆ ಗೌರವ ನಮನ ಸಲ್ಲಿಸಿದರು.
