ಚನ್ನರಾಯಪಟ್ಟಣ: ಮಹರ್ಷಿ ವಾಲ್ಮೀಕಿಯವರು ಜಗತ್ತಿಗೆ ರಾಮಾಯಣ ಮಹಾಕಾವ್ಯವನ್ನು ಕೊಡುಗೆಯಾಗಿ ನೀಡಿದ ಆದಿಕವಿ ಹಾಗೂ ಮಹಾನ್ ದಾರ್ಶನಿಕರು. ಅವರ ಕಾವ್ಯವು ಸತ್ಯ, ಧರ್ಮ, ನ್ಯಾಯ ಮತ್ತು ಕರ್ತವ್ಯನಿಷ್ಠೆಯೊಂದಿಗೆ ಬದುಕುವುದನ್ನು ಕಲಿಸಿಕೊಟ್ಟಿದೆ ಎಂದು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನ ಆದರ್ಶ ಜೀವನ ಹೇಗಿರಬೇಕು, ಮಾನವೀಯ ಮೌಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಹಾಗೂ ಸತ್ಯ, ಧರ್ಮ, ನ್ಯಾಯ ಮತ್ತು ಕರ್ತವ್ಯನಿಷ್ಠೆಯೊಂದಿಗೆ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಮಹರ್ಷಿ ವಾಲ್ಮೀಕಿಯವರು ತಮ್ಮ ಕಾವ್ಯದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ವಾಲ್ಮೀಕಿಯವರ ಚಿಂತನೆಗಳು ಹಾಗೂ ರಾಮಾಯಣದ ತತ್ವಗಳು ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಶಕ್ತಿಯನ್ನು ಹೊಂದಿವೆ. ಅವರ ಆದರ್ಶಗಳನ್ನು ಸ್ಮರಿಸುವುದರ ಜತೆಗೆ, ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇಂದಿನ ಸಮಾಜಕ್ಕೂ ರಾಮಾಯಣದ ಮೌಲ್ಯಗಳು ಪ್ರಸ್ತುತ
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್ ಮಾತನಾಡಿ, ರಾಮಾಯಣದ ಮೌಲ್ಯಗಳು ಶತಮಾನಗಳಿಂದಲೂ ನಮ್ಮ ಜೀವನದ ಭಾಗವಾಗಿವೆ. ಇಂದಿನ ಸಮಾಜಕ್ಕೂ ಅವು ಪ್ರಸ್ತುತವಾಗಿದ್ದು, ಮುಂದಿನ ಪೀಳಿಗೆಯ ಬದುಕಿಗೂ ಮಾರ್ಗದರ್ಶನ ನೀಡಲಿವೆ. ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಜೆ.ಎಸ್. ಶಂಕರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಡಿವೈಎಸ್ಪಿ ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್, ಸಮಾಜ ಕಲ್ಯಾಣಾಧಿಕಾರಿ ತ್ಯಾಗರಾಜು, ಕಚೇರಿ ವ್ಯವಸ್ಥಾಪಕ ಮೋಹನ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಲ್.ಪಿ. ಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್. ಮೂರ್ತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿಎಂಆರ್ ಮಂಜಣ್ಣ, ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ತೋಟಿ ಜಯರಾಮ್, ಟಿಎಪಿಎಂಎಸ್ ನಿರ್ದೇಶಕ ಉಮೇಶ್, ಕೆಡಿಪಿ ಸದಸ್ಯರಾದ ಗುರುಪ್ರಸಾದ್, ಕಬ್ಬಾಳ್ ಮಹೇಶ್, ದಡಿಗಟ್ಟ ಮಧು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
