ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಜಗಬೋರನಹಳ್ಳಿ ಗ್ರಾಮದ ಸಮೀಪ ಎರಡು ಬೃಹತ್ ಮದಗಜಗಳ ನಡುವೆ ಭೀಕರ ಕಾಳಗ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಗುಂಪಿನಿಂದ ಬೇರ್ಪಟ್ಟಿರುವ ಪ್ರಾಯದ ಎರಡು ಕಾಡಾನೆಗಳು ಪರಸ್ಪರ ತಿವಿಯುತ್ತಾ, ನೂಕಾಡುತ್ತಾ ಭೀಕರವಾಗಿ ಕಾದಾಡಿವೆ. ಆನೆಗಳ ಆರ್ಭಟ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಾಳಗ ನಡೆಯುತ್ತಿದ್ದ ಸ್ಥಳದ ಸುತ್ತ ನಾಯಿಗಳು ಗುಂಪುಗೂಡಿ ಬೊಗಳುತ್ತಿದ್ದು, ಅವುಗಳ ಮೇಲೂ ದಾಳಿ ಮಾಡಲು ಮದಗಜಗಳು ಮುಂದಾಗಿವೆ ಎನ್ನಲಾಗಿದೆ.
ಆನೆಗಳನ್ನು ಶಾಂತಗೊಳಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ

ಜಗಬೋರನಹಳ್ಳಿ ಗ್ರಾಮದ ಸಮೀಪವೇ ಬೀಡುಬಿಟ್ಟಿರುವ ಎರಡು ಕಾಡಾನೆಗಳ ಚಲನವಲನದ ಮೇಲೆ ಇಟಿಎಫ್ (ಆನೆ ಕಾರ್ಯಪಡೆ) ಸಿಬ್ಬಂದಿ ನಿರಂತರ ನಿಗಾ ಇರಿಸಿದ್ದಾರೆ. ಆನೆಗಳ ಕಾಳಗದಿಂದ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವುಗಳನ್ನು ಬೇರ್ಪಡಿಸಿ ಶಾಂತಗೊಳಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ

ಎರಡು ಮದಗಜಗಳು ಕಾಳಗದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಕಾಳಗವನ್ನು ವೀಕ್ಷಿಸಲು ಸ್ಥಳದಲ್ಲಿ ಗುಂಪುಗೂಡುವುದು, ಆನೆಗಳ ಫೋಟೋ ತೆಗೆಯುವುದು, ಸೆಲ್ಫಿ ಕ್ಲಿಕ್ಕಿಸುವುದು ಅಥವಾ ಅವುಗಳಿಗೆ ತೊಂದರೆ ನೀಡುವ ಕೆಲಸ ಮಾಡಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಮದದಲ್ಲಿರುವ ಕಾಡಾನೆಗಳು ಯಾವ ಕ್ಷಣದಲ್ಲಿ ಹೇಗೆ ವರ್ತಿಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕರು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಸಲಾಗಿದೆ.
ಎರಡು ದೈತ್ಯ ಮದಗಜಗಳ ಕಾಳಗದಿಂದ ಜಗಬೋರನಹಳ್ಳಿ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಇಟಿಎಫ್ ಸಿಬ್ಬಂದಿ ಪರಿಸ್ಥಿತಿಯ ಮೇಲೆ ನಿಗಾ ಮುಂದುವರಿಸಿದ್ದಾರೆ.
