ಕೆ.ಆರ್.ಪೇಟೆ: ತಾಲ್ಲೂಕಿನ ಸಾರಂಗಿ ಹಾಗೂ ಶ್ಯಾರಹಳ್ಳಿ, ಹೆತ್ತಗೋನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಹೆಚ್.ಟಿ ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಈ ಸೇತುವೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಈ ಸೇತುವೆ ನಿರ್ಮಾಣದಿಂದ ಹತ್ತಾರು ಗ್ರಾಮಗಳ ಜನರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕು, ಯಾವುದೇ ಲೋಪ ಬರಬಾರದು ಎಂದು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.

2028ಕ್ಕೂ ನಾನೇ ಮೈತ್ರಿ ಅಭ್ಯರ್ಥಿ:
ಮುಂದಿನ 2028ರ ವಿಧಾನಸಭಾ ಚುನಾವಣೆಗೂ ನಾನೇ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗುವುದು ಖಚಿತವಾಗಿದೆ. ತಾಲ್ಲೂಕಿನ ನೂರಾರು ಗ್ರಾಮಗಳ ಸಾವಿರಾರು ಯುವಕರು ಬೇರೆ ಬೇರೆ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ. ಇದು ನಮ್ಮ ಪಕ್ಷದ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ.
ಹಾಗಾಗಿ ಮತ್ತೊಮ್ಮೆ ತಾಲ್ಲೂಕಿನ ಜನತೆ ನಿಮ್ಮ ಮನೆಯ ಮಗನಾದ ನನ್ನನ್ನು ಮತ್ತೆ ಆಯ್ಕೆ ಮಾಡಿ, ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಲು ಸಹಕರಿಸುವಂತೆ ಕೈಮುಗಿದು ಮನವಿ ಮಾಡುತ್ತೇನೆ.

ನಾನು ಗೋವಿನಂತಹ ಮನಸ್ಸುಳ್ಳ ವ್ಯಕ್ತಿ, ವಿರೋಧಿಗಳಿಗೂ ಕೇಡು ಬಯಸುವುದಿಲ್ಲ. ಸಾಮಾನ್ಯ ರೈತನ ಮಗನಾಗಿದ್ದು, ನಿಮ್ಮ ಒಂದೊಂದು ಮತವು ವ್ಯರ್ಥವಾಗದಂತೆ ನಿಮ್ಮ ಸೇವೆಯನ್ನು ದಿನದ 24 ಗಂಟೆಗಳ ಕಾಲ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಸಾರಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ನಾಗೇಶ್, ನಿರ್ದೇಶಕ ಕೈಗೋನಹಳ್ಳಿ ನಂಜಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಶೋಭಾ ಮಂಜೇಗೌಡ, ಗ್ರಾ.ಪಂ ಮಾಜಿ ಸದಸ್ಯರಾದ ಸಾರಂಗಿ ರಮೇಶ್, ಕೊಟಗಹಳ್ಳಿ ಮಂಜು ಸೇರಿದಂತೆ ಗ್ರಾಮಸ್ಥರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.
