ಹಾಸನ: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಪ್ರಿಯಕರನ ಮನೆ ಮುಂದೆ ಧರಣಿ ನಡೆಸುತ್ತಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಲೇಸೋಮನಹಳ್ಳಿಯಲ್ಲಿ ನಡೆದಿದೆ.
ಕಾಸರಗೋಡು ಮೂಲದ ನಿಷ್ಮಾ ಎಂಬ ಯುವತಿ, ಕಲ್ಲೇಸೋಮನಹಳ್ಳಿಯ ಸೂರ್ಯ (26) ವಿರುದ್ಧ ಆರೋಪ ಮಾಡಿದ್ದಾರೆ. ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು ಐದು ತಿಂಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು ಎನ್ನಲಾಗಿದೆ.
ಯುವಕ ಸೂರ್ಯ ಸೆಪ್ಟೆಂಬರ್ 24ರಿಂದ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿರುವ ನಿಷ್ಮಾ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮನೆ ಮುಂದೆ ಹಗಲು-ರಾತ್ರಿ ಧರಣಿ
ಅಕ್ಟೋಬರ್ 22ರಂದು ಕಲ್ಲೇಸೋಮನಹಳ್ಳಿಗೆ ಆಗಮಿಸಿದ ನಿಷ್ಮಾ, ಸೂರ್ಯ ಅವರ ಮನೆ ಮುಂದೆ ಧರಣಿ ಆರಂಭಿಸಿದ್ದಾರೆ. ಸೂರ್ಯನನ್ನು ಕರೆಸುವುದಾಗಿ ಅವರ ಪೋಷಕರು ಭರವಸೆ ನೀಡಿದ್ದರು ಎನ್ನಲಾಗಿದ್ದು, ಬಳಿಕ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಮಳೆ ಮತ್ತು ಚಳಿಯ ನಡುವೆಯೂ ಯುವತಿ ಧರಣಿ ಮುಂದುವರಿಸಿದ್ದು, ತಮ್ಮ ಸಮಸ್ಯೆಗೆ ನ್ಯಾಯ ದೊರೆಯಬೇಕೆಂದು ಆಗ್ರಹಿಸಿದ್ದಾರೆ.

ಆರೋಪಿಯ ಪತ್ತೆಗೆ ಪೊಲೀಸರ ಕ್ರಮ
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸೂರ್ಯನ ಪತ್ತೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿ ಮಾಡಿರುವ ಆರೋಪಗಳ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
