ಶ್ಲೋಕ – 14
ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ॥೧೪॥
ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಃ ಚ ಪೃಥಕ್ ಚೇಷ್ಟಾ ದೈವಂ ಚ ಏವ ಅತ್ರ ಪಂಚಮಮ್ – ಕ್ರಿಯೆ ನಡೆಯುವ ತಾಣ, ಮಾಡುವ ಭಗವಂತ [ಜೀವ], ಬೇರೆಬೇರೆ ಉಪಕರಣಗಳು, ಬಗೆಬಗೆಯ ಪೂರಕ ಕ್ರಿಯೆಗಳು ಮತ್ತು ಐದನೆಯದಾದ ಅದೃಷ್ಟ[ಭಗವಂತ].
ಪ್ರತಿಯೊಂದು ಕ್ರಿಯೆ ನಡೆಯಲು ಐದು ಕಾರಣಗಳು:
(೧) ಅಧಿಷ್ಠಾನ: ಇಲ್ಲಿ ಅಧಿಷ್ಠಾನ ಎಂದರೆ ನೆಲೆ. ನಮ್ಮ ದೇಹವೇ ನಮ್ಮ ಅಧಿಷ್ಠಾನ. ಈ ಸಾಧನಾ ಶರೀರವಿಲ್ಲದೆ ಯಾವ ಕ್ರಿಯೆಯೂ ನಡೆಯುವುದಿಲ್ಲ. ನಿನಗೆ ದೊರೆತಿರುವ ಸಾಧನಾ ಶರೀರ ಆ ಭಗವಂತನ ಪ್ರಸಾದ.
(೨) ಕರ್ತಾ: ಶರೀರದಲ್ಲಿ ಕೂತು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುವ ಭಗವಂತ ಕರ್ತಾ. ಆತ ಸ್ವತಂತ್ರ. ಆತನಿಗೆ ಅಧೀನವಾಗಿರುವ ಜೀವ(ನಾನು-Self) ಸ್ವತಂತ್ರನಲ್ಲ. ಆದರೆ ಜೀವನಿಗೆ ಇಚ್ಛಾಪೂರ್ವಕ ಕೃತಿ ಇದೆ.
(೩) ಕರಣಗಳು: ನಮ್ಮ ಇಂದ್ರಿಯಗಳು. ನಮ್ಮ ಇಂದ್ರಿಯಗಳನ್ನು ದೇವತೆಗಳು ನಿಯಂತ್ರಿಸುತ್ತಾರೆ. ಇಂದ್ರಿಯಗಳ ಒಡೆಯ ಭಗವಂತ(ಹೃಷೀಕೇಶ). ಇಂದ್ರಿಯಗಳು ನಮಗೆ ಭಗವಂತನ ಮಹಾ ಪ್ರಸಾದ.
(೪) ವಿವಿಧ ಪೂರಕ ಸಾಧನಗಳು: ಒಂದು ಕ್ರಿಯೆ ಆಗಬೇಕಾದರೆ ಅದಕ್ಕೆ ಪೂರಕವಾದ ಅನೇಕ ಪೂರಕ ಸಾಧನಗಳು ಅಗತ್ಯ.
(೫) ದೈವಂ: ನಮ್ಮ ಪ್ರತಿಯೊಂದು ಕ್ರಿಯೆ ಭಗವಂತನ ಸಂಕಲ್ಪವನ್ನು ಅವಲಂಭಿಸಿದೆ. ಇದನ್ನು ಅದೃಷ್ಟ, ಹಣೆಬರಹ ಎಂದೂ ಕರೆಯಬಹುದು.
ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ- ಒಬ್ಬ ಅತ್ಯುತ್ತಮ ಮಾತುಗಾರ. ಆತ ಅಷ್ಟೊಂದು ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುತ್ತಾನೆ. ಆತ ಹೀಗೆ ಮಾತನಾಡಬೇಕಾದರೆ ಆತ ಮೂಗನಾಗಿರಬಾರದು, ಬಾಯಿ ಇದ್ದರೆ ಸಾಲದು-ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು, ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು, ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದದ ಹುಟ್ಟಿಗೆ ಆಕಾಶ-ಗಾಳಿ ಮಾಧ್ಯಮ. ಈ ಎಲ್ಲ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಹುಟ್ಟುವಾಗಲೇ ಮೂಗನಾಗಿ ಹುಟ್ಟಿದ್ದರೆ? ಜ್ಞಾನ ಪರಂಪರೆಯೇ ಇಲ್ಲದ ಮನೆತನದಲ್ಲಿ ಹುಟ್ಟಿದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ‘ನಾನು ಮಾಡಿದೆ’ ಎನ್ನುವ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ ಇರಲು ಸಾಧ್ಯ.
