ಕೊರಟಗೆರೆ: ತಾಲ್ಲೂಕಿನ ಒಂದನೇ ವಾರ್ಡ್ ವ್ಯಾಪ್ತಿಯ ಹನುಮಂತಪುರ ಗ್ರಾಮದ ಶ್ರೀ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಸೀಗೆ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಸೋಮವಾರ ಮುಂಜಾನೆಯಿಂದಲೇ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ವಿಳ್ಳೆದೆಲೆ ಹಾಗೂ ಪುಷ್ಪಾಲಂಕಾರಗಳಿಂದ ಸ್ವಾಮಿಯನ್ನು ಸುಂದರವಾಗಿ ಅಲಂಕರಿಸಿ, ದೇವರ ಮೆರವಣಿಗೆ ನಡೆಸಲಾಯಿತು. ಗ್ರಾಮದ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.

ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಮಾತನಾಡಿದ ದೊಡ್ಡ ವೀರಣ್ಣನವರು, ವೀರಭದ್ರ ಸ್ವಾಮಿಯ ಇತಿಹಾಸವು ವೀರತ್ವದ ಗುಣಗಳ ಕುರಿತು ಅರಿವು ಮೂಡಿಸುತ್ತದೆ. ಧರ್ಮದ ರಕ್ಷಣೆಗಾಗಿ ಹೋರಾಡಿದ ಸ್ವಾಮಿಯ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಅರ್ಚಕ ಹೇಮಂತ್ ಮಾತನಾಡಿ, “ಅಧರ್ಮದ ಹಾದಿಯಲ್ಲಿ ನಡೆಯುತ್ತಿದ್ದ ಯಜ್ಞವನ್ನು ನಾಶಪಡಿಸಿ, ಧರ್ಮದ ರಕ್ಷಣೆಗೆ ನಿಂತವರು ಶ್ರೀ ವೀರಭದ್ರ ಸ್ವಾಮಿ. ಅಂತಹ ವೀರತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಪರಿಶ್ರಮ ಹಾಗೂ ತ್ಯಾಗ ಅಗತ್ಯ. ಸ್ವಾಮಿಯ ಚರಿತ್ರೆಯು ಮಾತೃಪ್ರೇಮ, ಪಿತೃವಾಕ್ಯ ಪರಿಪಾಲನೆ ಮತ್ತು ನಂಬಿದ ಭಕ್ತರ ರಕ್ಷಣೆಯ ಮಹತ್ವವನ್ನು ಸಾರುತ್ತದೆ,” ಎಂದು ಹೇಳಿದರು.

ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯ ಪ್ರದೀಪ್ ಮಾತನಾಡಿ, “ಶ್ರೀ ವೀರಭದ್ರ ಸ್ವಾಮಿಯ ಮೇಲೆ ಭಕ್ತಿಯಿಂದ ನಂಬಿಕೆ ಇಟ್ಟವರಿಗೆ ಸ್ವಾಮಿಯ ಅನುಗ್ರಹ ದೊರೆಯುತ್ತದೆ ಎಂಬುದು ಭಕ್ತರ ವಿಶ್ವಾಸ. ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದು, ಅವರ ಕೃಪೆಗೆ ಪಾತ್ರರಾಗಬೇಕು,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಪವಿತ್ರ–ಯೋಗೀಶ್, ಶ್ರೀಮತಿ ರೂಪಾ–ಸೋಮುಕುಮಾರ್, ಶ್ರೀಮತಿ ಪೂರ್ಣಿಮಾ–ಯೋಗೀಶ್, ದೊಡ್ಡವೀರಪ್ಪ ಅವರ ಕುಟುಂಬದ ಸದಸ್ಯರು, ಅರ್ಚಕರಾದ ಹೇಮಂತ್, ನವೀನ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
