ಕೆ.ಆರ್.ಪೇಟೆ, ಅ. 28: ತಾಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದ ಹಲವು ಕಾಂಗ್ರೆಸ್ ಮುಖಂಡರು ಶಾಸಕ ಎಚ್.ಟಿ. ಮಂಜು ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಳೆದ ಮೂರೂವರೆ ವರ್ಷಗಳಲ್ಲಿ ಶಾಸಕ ಎಚ್.ಟಿ. ಮಂಜು ಅವರು ಬಲ್ಲೇನಹಳ್ಳಿ ಗ್ರಾಮ ಹಾಗೂ ಬೂಕನಕೆರೆ ಹೋಬಳಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಗ್ರಾಮದ ವ್ಯವಸಾಯೋತ್ಪನ್ನ ಸಹಕಾರ ಸಂಘ ಮತ್ತು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಸೇರಿದಂತೆ ಹಲವು ಮುಖಂಡರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಶಾಲು ಧರಿಸುವ ಮೂಲಕ ಅಧಿಕೃತವಾಗಿ ಜೆಡಿಎಸ್ ಸೇರಿದರು.
ಕಾಂಗ್ರೆಸ್ ಮುಖಂಡರಾದ ಬಿ.ಕೆ. ಕುಮಾರ್, ಬಿ.ಎಸ್. ಪುಟ್ಟರಾಜು, ನಾಗರಾಜು, ಬಿ.ಎನ್. ಗಣೇಶ್, ಯೋಗೇಶ್ ಬಿ.ಎನ್., ಬಯೋಗೇಗೌಡ, ಬಿ.ಎಸ್. ಕೃಷ್ಣಮೂರ್ತಿ, ಗೋಪಾಲ ಶೆಟ್ಟಿ, ಗೋಪಾಲ್ ರಾಜ್, ನಾಗೇಗೌಡ, ಸೋಮಶೇಖರ್, ತಮ್ಮೇಗೌಡ, ಕೃಷ್ಣೇಗೌಡ, ಮಾಚಗೋನಹಳ್ಳಿ ರಾಜು, ಯೋಗೇಂದ್ರ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಸೇರ್ಪಡೆಯಾದರು.

ನೂತನ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಸಕ ಎಚ್.ಟಿ. ಮಂಜು, ಕ್ಷೇತ್ರದಲ್ಲಿ ತಮ್ಮ ಶಕ್ತಿಮೀರಿ ಜನಸೇವೆ ಮಾಡಲು ಶ್ರಮಿಸುತ್ತಿದ್ದು, ಲಭ್ಯವಿರುವ ಅನುದಾನವನ್ನು ಆದ್ಯತೆಯ ಮೇರೆಗೆ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಲ್ಲೇನಹಳ್ಳಿ ದೊಡ್ಡ ಗ್ರಾಮವಾಗಿದ್ದು, ಇಲ್ಲಿನ ಕಾಂಗ್ರೆಸ್ ಮುಖಂಡರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಆನೆಬಲ ತಂದಿದೆ. ಇದು ಸಂತಸದ ಸಂಗತಿಯಾಗಿದೆ ಎಂದರು.
ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಎಪಿಎಂಸಿ ಚುನಾವಣೆಗಳಲ್ಲಿ ಪಕ್ಷದ ಸಾಧನೆ ಹೆಚ್ಚಿಸಲು ಈ ಸೇರ್ಪಡೆ ಸಹಕಾರಿಯಾಗಲಿದೆ. ಪಕ್ಷಕ್ಕೆ ಸೇರ್ಪಡೆಯಾಗುವ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ. ಮೋಹನ್, ಕಾರ್ಯಾಧ್ಯಕ್ಷ ಮೆಣಸ ಮಹಾದೇವೇಗೌಡ, ರೈತ ಮೋರ್ಚಾ ಅಧ್ಯಕ್ಷ ಹುಲ್ಲೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕುರುಬಹಳ್ಳಿ ಕೆ.ಬಿ. ನಾಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ರಾಮಚಂದ್ರನ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಜೆಡಿಎಸ್ ಮುಖಂಡರಾದ ಯಜಮಾನ್ ರಾಮಕೃಷ್ಣೇಗೌಡ, ದೊಡ್ಡಪಾಪೇಗೌಡ, ಗಂಜಿಗೆರೆ ಕೊಪ್ಪಲು ರಾಮಕೃಷ್ಣೇಗೌಡ, ಬಿ.ಎನ್. ನಾಗರಾಜು, ಮಾಜಿ ಸೊಸೈಟಿ ಅಧ್ಯಕ್ಷ ಪ್ರಸನ್ನಕುಮಾರ್, ಯುವ ಮುಖಂಡ ಸೋಮಶೇಖರ್, ಬಿ.ಎಂ. ಮಹೇಶ್, ನಾಗರಾಜು, ಸುಧಾಕರ್, ನಾಗೇಶ್, ದೊಡ್ಡಗಾಡಿಗನಹಳ್ಳಿ ಜೆ.ಸಿ.ಬಿ. ಕುಮಾರ್, ಕಬ್ಬಲಗೆರೆಪುರ ರಮೇಶ್, ರಾಮು ಹಾಗೂ ಪರಮೇಶ್ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
