ಚಾಮರಾಜನಗರ, ಅ. 28: ವಿಕಲಚೇತನ ಮಕ್ಕಳ ಕುಟುಂಬಗಳ ಆರ್ಥಿಕ ಸಬಲೀಕರಣ ಹಾಗೂ ಜೀವನೋಪಾಯಕ್ಕೆ ನೆರವಾಗುವ ಉದ್ದೇಶದಿಂದ ಮಾರ್ಗದರ್ಶಿ ಸೇವಾ ಸಂಸ್ಥೆ ಮತ್ತು ವಾಸವಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಅಕ್ಟೋಬರ್ 31ರಂದು 102ನೇ ಹಸು-ಕರು ದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಸತ್ತಿ ರಸ್ತೆಯಲ್ಲಿರುವ ಶಿವಕುಮಾರಸ್ವಾಮಿ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದು, ಫಲಾನುಭವಿಗಳಿಗೆ ಹಸು-ಕರುಗಳನ್ನು ವಿತರಿಸಲಿದ್ದಾರೆ. ಜಿಲ್ಲಾಧಿಕಾರಿ ಶ್ರೀರೂಪ, ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಗಂಗಾಧರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಬೆಂಗಳೂರಿನ ವಾಸವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪೋತಣ್ಣ ಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಿಂದ ಮಾರ್ಗದರ್ಶಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ವಿಕಲಚೇತನ ಮಕ್ಕಳ ಕುಟುಂಬಗಳಿಗೆ ಹಸು-ಕರುಗಳನ್ನು ದಾನವಾಗಿ ನೀಡುವ ಮೂಲಕ ಅವರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ವಿಕಲಚೇತನರ ಪುನರ್ವಸತಿ, ಮಕ್ಕಳ ಆರೈಕೆ ಮತ್ತು ಆರೈಕೆದಾರರ ಸಬಲೀಕರಣಕ್ಕೆ ಮಾರ್ಗದರ್ಶಿ ಸಂಸ್ಥೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಹೈನುಗಾರಿಕೆಯನ್ನು ಆದಾಯದ ಮೂಲವನ್ನಾಗಿಸಿಕೊಂಡು ಕುಟುಂಬಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಯೋಜನೆ ನೆರವಾಗುತ್ತಿದೆ. ಈವರೆಗೆ 102 ಹಸು-ಕರುಗಳನ್ನು ದಾನವಾಗಿ ನೀಡಲಾಗಿದ್ದು, ಸುಮಾರು 45ರಿಂದ 50 ಕುಟುಂಬಗಳು ಹೈನುಗಾರಿಕೆಯನ್ನು ಸುಸ್ಥಿರ ಉದ್ಯಮವಾಗಿ ಅಳವಡಿಸಿಕೊಂಡಿವೆ ಎಂದು ತಿಳಿಸಿದರು.
ಪ್ರತಿ ಫಲಾನುಭವಿ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸಿ ಸುಮಾರು 50 ಸಾವಿರ ರೂ. ಮೌಲ್ಯದ ಮಿಶ್ರತಳಿ ಹಸು ಮತ್ತು ಕರುಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಆರಂಭಿಕ ಹಂತದಲ್ಲಿ ಆಹಾರ ಕಿಟ್, ಜಾನುವಾರುಗಳಿಗೆ ಒಂದು ವರ್ಷದ ವಿಮೆ ಹಾಗೂ ಪಶು ಆಹಾರವನ್ನೂ ಒದಗಿಸಲಾಗುತ್ತದೆ. ದಾನದ ಮೂಲಕ ಫಲಾನುಭವಿ ಕುಟುಂಬಗಳಷ್ಟೇ ಅಲ್ಲದೆ, ಅಕ್ಕಪಕ್ಕದವರಿಗೂ ನೆರವು ನೀಡುವ ಸಂಪ್ರದಾಯವನ್ನು ಬೆಳೆಸಿಕೊಂಡು ಬರಲಾಗಿದೆ ಎಂದರು.
ಮಾರ್ಗದರ್ಶಿ ಸೇವಾ ಸಂಸ್ಥೆಯ ಉಪಾಧ್ಯಕ್ಷೆ ಗೀತಾಮೃತ ಮಾತನಾಡಿ, 1988ರಲ್ಲಿ ಸ್ಥಾಪನೆಯಾದ ಸಂಸ್ಥೆಯು ವಿಕಲಚೇತನರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಹಸು-ಕರು ದಾನ ಯೋಜನೆಯಿಂದ ಹಲವು ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ರಾಜಣ್ಣ ಮಾತನಾಡಿ, ವಾಸವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ವಿಕಲಚೇತನ ಕುಟುಂಬಗಳಿಗೆ ನೆರವಾಗುವ ಸಂಕಲ್ಪದೊಂದಿಗೆ ಕಳೆದ ಆರು ವರ್ಷಗಳಿಂದ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ. ಫಲಾನುಭವಿಗಳ ಆಯ್ಕೆಯನ್ನು ಮಾರ್ಗದರ್ಶಿ ಸಂಸ್ಥೆ ಮಾಡುತ್ತಿದ್ದು, ದಾನಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಟ್ರಸ್ಟ್ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಹಸು-ಕರು ದಾನದಿಂದ ದೊರೆತ ನೆರವು ಸಮರ್ಪಕವಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಫಲಾನುಭವಿಗಳ ಆರ್ಥಿಕ ಸ್ಥಿತಿ ಸುಧಾರಿಸಲು ಎರಡೂ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಕೃಷಿ ಮತ್ತು ಹೈನುಗಾರಿಕೆಯನ್ನು ಆಧರಿಸಿದ ಈ ಪ್ರಯತ್ನದ ಯಶೋಗಾಥೆಯನ್ನು ದಾಖಲಿಸುವ ನಿಟ್ಟಿನಲ್ಲಿ ಸುಮಾರು 100 ಫಲಾನುಭವಿಗಳು ಮತ್ತು ದಾನಿಗಳ ಅಭಿಪ್ರಾಯಗಳನ್ನು ಒಳಗೊಂಡ ಪುಸ್ತಕವನ್ನೂ ಪ್ರಕಟಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾರ್ಗದರ್ಶಿ ಸಂಸ್ಥೆಯ ಉಪಾಧ್ಯಕ್ಷೆ ಗೀತಾಮೃತ, ವಾಸವಿ ಚಾರಿಟಬಲ್ ಟ್ರಸ್ಟ್ ಸದಸ್ಯರಾದ ಶ್ರೀಧರ್, ಗಿರಿಜಾ ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಶ್ರೀ ಸಾಯಿ ಎಸ್. ಮಂಜು
