ಕೊರಟಗೆರೆ: ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದೆ. ಅವರ ಸಂತತಿಯಾದ ನಾಯಕ ಸಮುದಾಯದವರು ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ದೊಡ್ಡಬಳ್ಳಾಪುರದ ವಾಲ್ಮೀಕಿ ಗುರುಪೀಠದ ಬ್ರಹ್ಮಾನಂದ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಹೊನ್ನಾರನಹಳ್ಳಿ ಗ್ರಾಮದಲ್ಲಿ ನಡೆದ ಅದ್ದೂರಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣವು ಮಾನವೀಯ ಮೌಲ್ಯಗಳು, ಧರ್ಮ, ಸತ್ಯ ಮತ್ತು ನ್ಯಾಯದ ಮಹತ್ವವನ್ನು ಸಾರುತ್ತದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮುದಾಯದವರು ಎಷ್ಟೇ ಬಡತನವಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳು ಜೀವನದ ಸವಾಲುಗಳನ್ನು ಎದುರಿಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವ ಮನೋಭಾವ ಬೆಳೆಸುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ತಂದೆ-ತಾಯಿಗಳು ಎಚ್ಚರಿಕೆ ವಹಿಸಬೇಕು. ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ತಿಳಿಸಿದರು.
ಜಯಂತಿ ಅಂಗವಾಗಿ ನೂರಾರು ಮಹಿಳೆಯರು ಕುಂಭ-ಕಳಸಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ ಹಾಗೂ ವಿವಿಧ ಜನಪದ ವಾದ್ಯಗಳ ಪ್ರದರ್ಶನ ಗಮನ ಸೆಳೆಯಿತು. ಜಯಂತಿ ಪ್ರಯುಕ್ತ ಗ್ರಾಮದಲ್ಲಿ ನೂರಾರು ಜನರಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖಂಡರಾದ ತೀರ್ಥಕುಮಾರ್, ರಾಘವೇಂದ್ರ, ರಾಮಣ್ಣ, ನರಸಿಂಹಮೂರ್ತಿ, ವೀರಣ್ಣ, ಶಶಿಕುಮಾರ್, ರಮೇಶ್, ರವಿಕುಮಾರ್, ಕಾಳಿಚರಣ್, ಮಂಜುನಾಥ್ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ್, ಕೊರಟಗೆರೆ
