ತುಮಕೂರು: ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಬಹುದು ಎಂದು ಕಾಂಗ್ರೆಸ್ ಒಕ್ಕೂಟ ಮಾಡುತ್ತಿರುವ ಪ್ರಯತ್ನ ಫಲಿಸುವುದಿಲ್ಲ, ಪ್ರಜಾತಂತ್ರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರಿಗೆ ದೇಶದ ಜನ ಅಧಿಕಾರದ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು.ಮನೆಮನೆಗೂ ಹೋಗಿ ಮತದಾರರನ್ನು ಭೇಟಿ ಮಾಡಿ ಮತದಾರರ ಪಟ್ಟಿ ತಯಾರು ಮಾಡುವುದು ಎಸ್ಐಆರ್ನ ಕ್ರಮ. ತುಮಕೂರು ಜಿಲ್ಲೆಯ ಮತದಾರರ ಪಟ್ಟಿ ತಯಾರಿಸಲು ದೆಹಲಿ ಅಧಿಕಾರಿಗಳು ಬರುವುದಿಲ್ಲ. ಇಲ್ಲಿನ ಅಧಿಕಾರಿಗಳೇ ಮತದಾರರ ಪಟ್ಟಿ ತಯಾರು ಮಾಡಿ ಕೊಡುತ್ತಾರೆ. ಬಿಟ್ಟುಹೋದ, ಸೇರ್ಪಡೆ ಮಾಡಬೇಕಾದ ಮತದಾರರ ಹೆಸರನ್ನು ಸೂಕ್ತ ದಾಖಲಾತಿ ನೀಡಿ ಸೇರಿಸಬಹುದು. ದೇಶದ ಎಲ್ಲಾ ಅರ್ಹ ಮತದಾರರೂ ಮತಪಟ್ಟಿಯಲ್ಲಿ ಸೇರುವ ಹಕ್ಕು ಇದೆ. ಇದೂ ಗೊತ್ತಿದ್ದೂ ಎಸ್ಐಆರ್ ಬಗ್ಗೆ ವಿರೋಧ ಮಾಡುತ್ತಿರುವ ನಿಮ್ಮ ಉದ್ದೇಶವೇನು ಎಂದು ಕಾಂಗ್ರೆಸ್ ನಾಯಕರಿಗೆ ಕೇಳಿದರು.
ಮನೆಮನೆಗೆ ಹೋಗಿ ಎಸ್ಐಆರ್ ಪ್ರಕ್ರಿಯೆ ನಡೆಸಬೇಕು. ಆದರೆ ಮಸೀದಿಗಳಲ್ಲಿ, ಉರ್ದು ಶಾಲೆಗಳಲ್ಲಿ ಕುಳಿತು ಎಸ್ಐಆರ್ ಮಾಡುತ್ತಿರುವ ಬಗ್ಗೆ ಫೋಟೋ, ವಿಡಿಯೊ ಸಮೇತ ದೂರು ನೀಡಿದ್ದೆವು, ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ,ಕಾಂಗ್ರೆಸ್ ನಾಯಕರು ಎಸ್ಐಆರ್ ಬಗ್ಗೆ ಗೊಂದಲ ಉಂಟು ಮಾಡಿ ಅರಾಜಕತೆ ಸೃಷ್ಟಿಸಲು ಹೊರಟಿರುವುದನ್ನು ದೇಶದ ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ದೇಶದ್ರೋಹಿಗಳ ಹಾಗೂ ಸಿಜೆಪಿಯವರ ಜೊತೆ ಸೇರಿಕೊಂಡು ಬಂಗಾಲ, ಶ್ರೀಲಂಕ, ನೇಪಾಲ ರೀತಿಯಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿ ದೇಶದ ಅಧಿಕಾರ ಹಿಡಿಯಬಹುದು ಎಂಬ ಪ್ರಯತ್ನದಲ್ಲಿರುವ ಕಾಂಗ್ರೆಸ್ ನಾಯಕರ ಧೋರಣೆ ಜನರಿಗೆ ಅರ್ಥವಾಗಿದೆ. ಯಾವುದೇ ಕಾರಣಕ್ಕೂ ಜನ ನಿಮಗೆ ಅಧಿಕಾರ ನೀಡುವುದಿಲ್ಲ, ದೇಶದ್ರೋಹಿಗಳ ಕೈಗೆ ದೇಶ ಹೋಗಲು ಭಾರತೀಯ ಜನತಾ ಪಕ್ಷವೂ ಬಿಡುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್, ಚಿದಾನಂದಗೌಡ, ಅಂಬಿಕಾ ಹುಲಿನಾಯ್ಕರ್, ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ವಕ್ತಾರ ಜೆ.ಜಗದೀಶ್ ಮೊದಲಾದವರು ಹಾಜರಿದ್ದರು.
ವರದಿ : ಕೆ ಬಿ ಚಂದ್ರಚೂಡ್
