ಬೆಂಗಳೂರು: ದೇಶದ ಸಾಂಪ್ರದಾಯಿಕ ಕರಕುಶಲ ಕಲೆಗಳು ಮತ್ತು ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಇಂಡಿಯಾ ಎಕ್ಸಿಮ್ ಬ್ಯಾಂಕ್ ಆಯೋಜಿಸಿರುವ 11ನೇ ಆವೃತ್ತಿಯ ‘ಎಕ್ಸಿಮ್ ಬಜಾರ್’ಗೆ ಬೆಂಗಳೂರಿನ ಜಯಮಹಲ್ ಪ್ಯಾಲೇಸ್ನಲ್ಲಿ ನವೆಂಬರ್ 1ರಂದು ಚಾಲನೆ ನೀಡಲಾಯಿತು.
ನವೆಂಬರ್ 1ರಿಂದ 8ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 90 ಕುಶಲಕರ್ಮಿಗಳು ಭಾಗವಹಿಸಿದ್ದಾರೆ. ಕರ್ನಾಟಕ ಕರಕುಶಲ ಮಂಡಳಿಯ ಅಧ್ಯಕ್ಷೆ ಚಂದ್ರಾ ಜೈನ್ ಹಾಗೂ ಇಂಡಿಯಾ ಎಕ್ಸಿಮ್ ಬ್ಯಾಂಕ್ನ ಉಪ ವ್ಯವಸ್ಥಾಪಕ ನಿರ್ದೇಶಕಿ ದೀಪಾಲಿ ಅಗರ್ವಾಲ್ ಜಂಟಿಯಾಗಿ ಪ್ರದರ್ಶನ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಾ ಜೈನ್, ಕರಕುಶಲ ಕ್ಷೇತ್ರವು ಭಾರತದ ಆರ್ಥಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಲಕ್ಷಾಂತರ ಜನರ ಜೀವನೋಪಾಯಕ್ಕೆ ಆಧಾರವಾಗಿರುವ ಈ ಕ್ಷೇತ್ರ ಉದ್ಯೋಗ ಸೃಷ್ಟಿಯಲ್ಲಿಯೂ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.
ದೀಪಾಲಿ ಅಗರ್ವಾಲ್ ಮಾತನಾಡಿ, ಎಕ್ಸಿಮ್ ಬಜಾರ್ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸಲು, ಮಾರುಕಟ್ಟೆ ವಿಸ್ತರಿಸಲು ಹಾಗೂ ಬ್ರ್ಯಾಂಡ್ ಗುರುತಿಸುವಿಕೆ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಭಾರತದ 64.66 ಲಕ್ಷ ಕರಕುಶಲ ಕಾರ್ಮಿಕರು ಮತ್ತು ಕುಶಲಕರ್ಮಿಗಳ ಪೈಕಿ ಶೇ.64ರಷ್ಟು ಮಹಿಳೆಯರಿದ್ದಾರೆ. 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಕರಕುಶಲ ಉತ್ಪನ್ನಗಳ ರಫ್ತು 1.8 ಶತಕೋಟಿ ಅಮೆರಿಕನ್ ಡಾಲರ್ ತಲುಪಿದೆ ಎಂದು ಅವರು ಮಾಹಿತಿ ನೀಡಿದರು.
ವೈವಿಧ್ಯಮಯ ಕಲಾಕೃತಿಗಳ ಪ್ರದರ್ಶನ
ಮಧುಬನಿ, ವಾರ್ಲಿ, ಪಿಚ್ವಾಯಿ, ಪಟ್ಟಚಿತ್ರ ಮತ್ತು ಫಡ್ ಚಿತ್ರಕಲೆಗಳು, ಚರ್ಮದ ಬೊಂಬೆಗಳು, ಬನಾರಸಿ ರೇಷ್ಮೆ ಬಟ್ಟೆಗಳು, ಬ್ಲೂ ಪಾಟರಿ, ಡೋಕ್ರಾ ಕಲೆ, ಟೆರಾಕೋಟಾ ಉತ್ಪನ್ನಗಳು, ಜಮ್ದಾನಿ ಹಾಗೂ ಅಜ್ರಖ್ ಸೀರೆಗಳು ಸೇರಿದಂತೆ ವಿವಿಧ ರಾಜ್ಯಗಳ ವಿಶಿಷ್ಟ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿವೆ.
ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಕುಶಲಕರ್ಮಿಗಳೂ ಮೇಳದಲ್ಲಿ ಭಾಗವಹಿಸಿದ್ದು, ತಮ್ಮ ಸಾಂಪ್ರದಾಯಿಕ ಕೌಶಲ್ಯ ಮತ್ತು ಕಲಾಪ್ರತಿಭೆಯನ್ನು ಪರಿಚಯಿಸುತ್ತಿದ್ದಾರೆ.
ಇಂಡಿಯಾ ಎಕ್ಸಿಮ್ ಬ್ಯಾಂಕ್ನ ‘ಗ್ರಾಸ್ರೂಟ್ಸ್ ಇನಿಶಿಯೇಟಿವ್ಸ್ ಅಂಡ್ ಡೆವಲಪ್ಮೆಂಟ್’ (GRID) ಹಾಗೂ ‘ಮಾರ್ಕೆಟಿಂಗ್ ಅಡ್ವೈಸರಿ ಸರ್ವಿಸಸ್’ (MAS) ಕಾರ್ಯಕ್ರಮಗಳ ಮೂಲಕ ಕುಶಲಕರ್ಮಿಗಳು, ನೇಕಾರರು, ಸ್ವಸಹಾಯ ಸಂಘಗಳು ಮತ್ತು ಸೂಕ್ಷ್ಮ ಉದ್ಯಮಗಳಿಗೆ ತರಬೇತಿ, ಮಾರುಕಟ್ಟೆ ಸಂಪರ್ಕ ಹಾಗೂ ಅಂತರರಾಷ್ಟ್ರೀಯ ವ್ಯಾಪಾರಾವಕಾಶಗಳನ್ನು ಒದಗಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಜಯಮಹಲ್ ಪ್ಯಾಲೇಸ್ನಲ್ಲಿ ಆಯೋಜಿಸಿರುವ ಈ ಎಂಟು ದಿನಗಳ ಮೇಳವು ಸ್ಥಳೀಯ ಕಲೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣ ಮತ್ತು ಸಾಂಪ್ರದಾಯಿಕ ಕಲೆಯ ಸಂರಕ್ಷಣೆಗೆ ನೆರವಾಗುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯ ಬೆಂಗಳೂರು ನಿರ್ದೇಶಕ ಡಾ. ಯತೀಂದ್ರ ಲಕ್ಕಣ್ಣ ಹಾಗೂ ಹ್ಯಾಂಡ್ಲೂಮ್ ಸರ್ವಿಸ್ ಸೆಂಟರ್ನ ಸಹಾಯಕ ನಿರ್ದೇಶಕ ಕೆ.ಎಸ್. ಸುನಿಲ್ ಕುಮಾರ್ ಉಪಸ್ಥಿತರಿದ್ದರು.
