ಕೊರಟಗೆರೆ: ಗ್ರಾಮೀಣ ಅಭಿವೃದ್ಧಿ, ಉತ್ತಮ ಆಡಳಿತ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುವ ಸಂಕಲ್ಪದೊಂದಿಗೆ ಮುಂಬರುವ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ತೋವಿನಕೆರೆ ಕ್ಷೇತ್ರದಿಂದ ಎನ್ಡಿಎ ಮೈತ್ರಿಕೂಟದ ಪ್ರಬಲ ಆಕಾಂಕ್ಷಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವುದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಎ. ಗೀತಾ ತಿಳಿಸಿದ್ದಾರೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸೇವೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು, ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ.
ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವುದು ತಮ್ಮ ಉದ್ದೇಶವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಶೌಚಾಲಯಗಳ ನಿರ್ಮಾಣ, ರಸ್ತೆ ಅಭಿವೃದ್ಧಿ ಹಾಗೂ ಗ್ರಾಮಗಳ ಸರ್ವತೋಮುಖ ಪ್ರಗತಿಗೆ ಆದ್ಯತೆ ನೀಡಲಾಗುವುದು. ಜನರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಮಹಿಳೆಯರ ಪ್ರಗತಿಗೆ ಸಮಾಜಸೇವೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಎ. ಗೀತಾ, ಮಹಿಳೆಯರ ಪ್ರಗತಿ ಮತ್ತು ಶಿಕ್ಷಣಕ್ಕೆ ಪೂರಕವಾದ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಣ್ಣುಮಕ್ಕಳಿಗೆ ಶಾಲಾ ಬ್ಯಾಗ್, ಪುಸ್ತಕಗಳನ್ನು ವಿತರಿಸುವುದು, ಬಟ್ಟೆ ಹಾಗೂ ಮಣ್ಣಿನ ದೀಪಗಳನ್ನು ಉಡುಗೊರೆಯಾಗಿ ನೀಡುವುದು ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ನೆರವಾಗುತ್ತಿದ್ದಾರೆ.

ಕಷ್ಟದಲ್ಲಿರುವ ಮಹಿಳೆಯರಿಗೆ ಸಾಂತ್ವನ ಹೇಳಿ, ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದೆಯೂ ಜನರ ಸೇವೆಗೆ ಸದಾ ಸಿದ್ಧಳಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುವುದಾಗಿ ಎ. ಗೀತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರದಿ: ನರಸಿಂಹಯ್ಯ ಹೊಸಕೋಟೆ
