ಧಾರವಾಡ: ಪ್ರಸಿದ್ಧ ಕನ್ನಡ ಸಾಹಿತಿ, ಅನುವಾದಕ, ಶಿಕ್ಷಣತಜ್ಞ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿನದತ್ತ ದೇಸಾಯಿ ಅವರು ನಿಧನರಾಗಿದ್ದಾರೆ. ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗ್ರಾಮದವರಾದ ಅವರು ಸಾಹಿತ್ಯ, ಶಿಕ್ಷಣ ಮತ್ತು ನ್ಯಾಯಾಂಗ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು.
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಿನದತ್ತ ದೇಸಾಯಿ ಅವರ ಮೊದಲ ಕೃತಿ ‘ನೀಲಾಂಜನಾ’. ‘ಮತ್ತೆ ಬಂದಿದ್ದೇನೆ’, ‘ಮಧುಶಾಲಿನಿ’, ‘ಒಳಗಿನ ಮಳೆ’ ಮತ್ತು ‘ಹೆಜ್ಜೆ ಸಾಲು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದರು. ಸಾಹಿತ್ಯದ ಜೊತೆಗೆ ಅನುವಾದ ಕ್ಷೇತ್ರದಲ್ಲಿಯೂ ಅವರು ಗುರುತಿಸಿಕೊಂಡಿದ್ದರು.
ಅವರ ಸಾಹಿತ್ಯಿಕ ಸಾಧನೆಗೆ 2017ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2021ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. 2015ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದರು. 2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತೀಯ ಜೈನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಜಿನದತ್ತ ದೇಸಾಯಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
