ಕೊರಟಗೆರೆ: ಆಧುನಿಕತೆಯ ಭರಾಟೆ ಹಾಗೂ ಸೋಶಿಯಲ್ ಮೀಡಿಯಾದ ಅಬ್ಬರದ ನಡುವೆ ಗ್ರಾಮೀಣ ಭಾಗದ ಮಣ್ಣಿನ ಸೊಗಡಿನ ದೇಸಿ ಕಲೆಗಳು ನಿಧಾನವಾಗಿ ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪೂರ್ವಜರಿಂದ ಬಂದ ಜಾನಪದ ಕಲೆ, ಸಾಂಪ್ರದಾಯಿಕ ಹಾಡುಗಳು ಹಾಗೂ ಕೋಲಾಟದ ಪರಂಪರೆಯನ್ನು ಇಂದಿಗೂ ಉಳಿಸಿ ಬೆಳೆಸುತ್ತಿರುವ ಗ್ರಾಮೀಣ ಕಲಾವಿದರು ನಾಡಿನ ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತೀಕವಾಗಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಸಕೋಟೆ ಗೊಲ್ಲರಹಟ್ಟಿಯ ಕೋಲಾಟ ಕಲಾವಿದರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಇಂದಿನ ಯುವಜನತೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಿರುವ ಸಂದರ್ಭದಲ್ಲಿ, ಈ ಗ್ರಾಮದ ಕಲಾವಿದರು ಕೋಲಾಟದ ಹೆಜ್ಜೆ, ಜಾನಪದ ಹಾಡುಗಳ ಗಾಯನ ಹಾಗೂ ದೇಸಿ ಸಂಸ್ಕೃತಿಯ ಮೂಲಕ ತಮ್ಮ ಪೂರ್ವಜರ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಶಿವಣ್ಣನ ಕಲಾ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ
ಹೊಸಕೋಟೆ ಗ್ರಾಮದ ಕೋಲಾಟ ಕಲಾವಿದ ಎಚ್.ಎಸ್. ಶಿವಣ್ಣ ಅವರು ಹಲವು ವರ್ಷಗಳಿಂದ ದೇಸಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕಲಾ ಪ್ರತಿಭೆ ಹಾಗೂ ಜಾನಪದ ಕಲೆಯ ಮೇಲಿನ ಆಸಕ್ತಿಯನ್ನು ಗುರುತಿಸಿದ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಪುಟ್ಟಣ್ಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಈರಣ್ಣ ಅವರು ಶಿವಣ್ಣನವರ ಸಾಧನೆಯನ್ನು ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದರು.
ಇದರ ಫಲವಾಗಿ ನವೆಂಬರ್ 1ರಂದು ನಡೆದ ತಾಲ್ಲೂಕು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಎಚ್.ಎಸ್. ಶಿವಣ್ಣ ಅವರಿಗೆ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಗ್ರಾಮೀಣ ಕಲಾ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ಕಲಾವಿದನಿಗೆ ಪ್ರಶಸ್ತಿ ಲಭಿಸಿರುವುದು ಹೊಸಕೋಟೆ ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಕೋಲಾಟ ಕಲೆಗೆ ಐತಿಹಾಸಿಕ ಹಿನ್ನೆಲೆ
ಕೋಲಾಟವು ಜಗಳೂರು ತಾಲ್ಲೂಕಿನ ಕಲ್ದೇವಪುರದಲ್ಲಿ ಹುಟ್ಟಿಕೊಂಡಿದೆ ಎನ್ನಲಾಗುತ್ತದೆ. ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಈ ಕಲೆಯು ಗ್ರಾಮೀಣ ಜನಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಇಂತಹ ಸಾಂಪ್ರದಾಯಿಕ ಕಲೆಗಳನ್ನು ಕಲಿಯುವ ಮತ್ತು ಮುಂದುವರಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಹೀಗಾಗಿ, ಗ್ರಾಮೀಣ ಕಲಾವಿದರನ್ನು ಕೇವಲ ಪ್ರಶಸ್ತಿ ಮತ್ತು ಸನ್ಮಾನಗಳಿಗೆ ಸೀಮಿತಗೊಳಿಸದೆ, ಅವರಿಗೆ ಸೂಕ್ತ ಪ್ರೋತ್ಸಾಹ ಹಾಗೂ ವೇದಿಕೆಗಳನ್ನು ಕಲ್ಪಿಸಬೇಕು. ಅವರಲ್ಲಿರುವ ಪ್ರತಿಭೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ನಮ್ಮ ಮಣ್ಣಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕಿದೆ ಎಂಬುದು ಕಲಾಭಿಮಾನಿಗಳ ಆಶಯವಾಗಿದೆ.
ಶಿವಣ್ಣನ ಸಾಧನೆ ಗುರುತಿಸಿದವರಿಗೆ ಸನ್ಮಾನ
ಎಚ್.ಎಸ್. ಶಿವಣ್ಣ ಅವರಿಗೆ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆಯಲು ಅವರ ಕಲಾ ಪ್ರತಿಭೆಯನ್ನು ಗುರುತಿಸಿ ತಾಲ್ಲೂಕು ಆಡಳಿತದ ಗಮನಕ್ಕೆ ತಂದ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಪುಟ್ಟಣ್
