ಬೆಂಗಳೂರು: ** ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ, ಚನ್ನಪಟ್ಟಣ ತಾಲೂಕಿನ ಸಿದ್ದನಹಳ್ಳಿಯ ಸಾಹಿತಿ ಹಾಗೂ ಉಪನ್ಯಾಸಕ ಡಾ. ಎಸ್. ರಾಮಲಿಂಗೇಶ್ವರ (ಡಾ. ಸಿಸಿರಾ) ಅವರಿಗೆ ‘ಕನ್ನಡ ಕಣ್ಮಣಿ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.
ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿರುವ ಡಾ. ಸಿಸಿರಾ ಅವರು, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಭಾಷೆಯ ಶ್ರೀಮಂತಿಕೆ, ಗಾಂಧಿ ಹಾಗೂ ವಿವೇಕಾನಂದರ ಆದರ್ಶಗಳು, ನಾಡಿನ ಸಂಸ್ಕೃತಿ ಮತ್ತು ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ತಮ್ಮ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನರಿಗೆ ಪರಿಚಯಿಸುತ್ತಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಉಪಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಕರ್ನಾಟಕ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಚಿ.ನಾ. ರಾಮು ಅವರು ಪ್ರಶಸ್ತಿ ಪ್ರದಾನ ಮಾಡಿ, ಡಾ. ಸಿಸಿರಾ ಅವರ ಕನ್ನಡಪರ ಸೇವೆಯನ್ನು ಶ್ಲಾಘಿಸಿದರು.
ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಬೆಳೆದಿರುವ ಅವರು, ಅಲ್ಲಿನ ಜನಜೀವನ, ಆಚಾರ-ವಿಚಾರ, ಸಂಸ್ಕೃತಿ ಮತ್ತು ಮಣ್ಣಿನ ಸೊಗಡನ್ನು ತಮ್ಮ ಸಾಹಿತ್ಯದಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಬದುಕಿನ ಭಾವನೆಗಳು ಹಾಗೂ ನೆಲಮೂಲದ ಸಂಸ್ಕೃತಿಯನ್ನು ಸಾಹಿತ್ಯದ ಮೂಲಕ ಪರಿಚಯಿಸುವ ಅವರ ಪ್ರಯತ್ನ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಿದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೊರೆತಿರುವ ಈ ರಾಜ್ಯಮಟ್ಟದ ಗೌರವ ಸಿದ್ದನಹಳ್ಳಿ ಹಾಗೂ ಚನ್ನಪಟ್ಟಣ ತಾಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.
ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ಚಿತ್ರ ನಿರ್ಮಾಪಕ ಉಮೇಶ್ ಬಣಕಾರ್, ಹೋರಾಟಗಾರರಾದ ಬಸವರಾಜ ಪಡುಕೋಟೆ ಮತ್ತು ಪ್ರಶಾಂತ್, ಚಿತ್ರನಟರಾದ ಗಣೇಶ್ ರಾವ್ ಕೇಸರಕರ್ ಹಾಗೂ ಅದ್ಭತ್, ಸಂಘಟನೆಯ ನಗರಾಧ್ಯಕ್ಷ ಕನ್ನಡ ಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಕವಯಿತ್ರಿ ಕೆ.ಟಿ. ಲತಾ ಅವರ ನಿರೂಪಣೆ ಹಾಗೂ ಗಾಯಕರಾದ ಬೆಂಗಳೂರು ಮುನಿಯಪ್ಪ ಮತ್ತು ಎಲ್. ಬಸವಲಿಂಗ ಅವರ ಗಾಯನ ಸಮಾರಂಭಕ್ಕೆ ಮೆರುಗು ನೀಡಿತು.
ತಾಲೂಕಿನಲ್ಲಿ ಸಂತಸ
ಚನ್ನಪಟ್ಟಣ ತಾಲೂಕಿನ ಗ್ರಾಮೀಣ ನೆಲದಿಂದ ಹೊರಹೊಮ್ಮಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ. ಎಸ್. ರಾಮಲಿಂಗೇಶ್ವರ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾಂಸ್ಕೃತಿಕ ವಲಯದಲ್ಲಿ ಸಂತಸ ಮೂಡಿಸಿದೆ.
ಚಿತ್ರ ಶೀರ್ಷಿಕೆ: ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಕನ್ನಡ ಹೋರಾಟಗಾರ ಅನಿಕೇತನ ಮಾಯಣ್ಣ ಹಾಗೂ ಹಿರಿಯ ಸಿನಿಮಾ ನಟ ಗಣೇಶ್ ರಾವ್ ಕೇಸರಕರ್ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಕರ್ನಾಟಕ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಚಿ.ನಾ. ರಾಮು ಅವರು ‘ಕನ್ನಡ ಕಣ್ಮಣಿ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
