ಬೆಂಗಳೂರು: ರಾಜ್ಯದಲ್ಲಿ ಬೆಳಕಿಗೆ ಬಂದಿರುವ ನಕಲಿ ಔಷಧ ಜಾಲ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತಷ್ಟು ವಿಸ್ತರಿಸಿದೆ. ಪ್ರಕರಣದ ಪ್ರಮುಖ ಶಂಕಿತ ಆರೋಪಿ ವಿದೇಶಿ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಅಜರ್ಬೈಜಾನ್ ದೇಶಗಳಲ್ಲಿನ ಸಂಪರ್ಕ ಮತ್ತು ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಬೆಂಗಳೂರು ಹೊರವಲಯದ ತಾವರೆಕೆರೆಯಲ್ಲಿ ಆಗಸ್ಟ್ 18ರಂದು ನಕಲಿ ಔಷಧ ಜಾಲ ಪತ್ತೆಯಾಗಿತ್ತು. ಈ ಪ್ರಕರಣದ ಕುರಿತು ಕರ್ನಾಟಕ ವಿಶೇಷ ತನಿಖಾ ದಳ (ಎಸ್ಐಟಿ) ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯವೂ ಪ್ರಕರಣದ ಹಣಕಾಸು ವಹಿವಾಟುಗಳ ಕುರಿತು ತನಿಖೆ ಆರಂಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಬೆಂಗಳೂರಿನ ಮಿನರ್ವ ಸರ್ಕಲ್ನಲ್ಲಿರುವ ಕೃಪಾ ಹೆಲ್ತ್ಕೇರ್ ಮಾಲೀಕ ವೀರೇಶ್ ಕುಮಾರ್ ಜೈನ್ ಅವರಿಗೆ ಸಂಬಂಧಿಸಿದ ಸುಮಾರು 9 ಲಕ್ಷ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಮುಖ ಆರೋಪಿಯ ವಿದೇಶಿ ಸಂಪರ್ಕದ ಜಾಡು
ಪ್ರಕರಣದ ಪ್ರಮುಖ ಶಂಕಿತ ಆರೋಪಿ ಆರ್. ಪ್ರಶಾಂತ್ ಅಲಿಯಾಸ್ ಪ್ರಶಾಂತ್ ರಾಜನ್ ಬಾಬು ಅವರ ವಿದೇಶಿ ಹಣಕಾಸು ವ್ಯವಹಾರಗಳ ಬಗ್ಗೆ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಟರ್ಕಿ ಮತ್ತು ಅಜರ್ಬೈಜಾನ್ ದೇಶಗಳಲ್ಲಿನ ಸಂಪರ್ಕಗಳು ಹಾಗೂ ಶಾರ್ಜಾ ಸೇರಿದಂತೆ ಯುಎಇಯಲ್ಲಿರುವ ಸಂಪರ್ಕಗಳ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ನಕಲಿ ಔಷಧಗಳ ಜಾಲದಿಂದ ಬಂದಿರಬಹುದಾದ ಹಣದ ವರ್ಗಾವಣೆ, ವಿದೇಶಿ ಹಣಕಾಸು ವಹಿವಾಟು ಹಾಗೂ ಆರೋಪಿಗಳಿಗೆ ಸಂಬಂಧಿಸಿದ ಆಸ್ತಿಗಳ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಎಸ್ಐಟಿ ತನಿಖೆಯ ಜೊತೆಗೆ ಇಡಿಯ ಹಣಕಾಸು ತನಿಖೆಯೂ ಮುಂದುವರಿದಿದ್ದು, ಪ್ರಕರಣದಲ್ಲಿ ಇನ್ನಷ್ಟು ಅಂಶಗಳು ಬಹಿರಂಗವಾಗುವ ನಿರೀಕ್ಷೆಯಿದೆ. ವಿದೇಶಿ ಸಂಪರ್ಕ ಮತ್ತು ಹಣಕಾಸು ವ್ಯವಹಾರಗಳ ಕುರಿತ ಆರೋಪಗಳು ತನಿಖೆಯ ಹಂತದಲ್ಲಿವೆ.
