ಕೆ ಆರ್ ಪೇಟೆ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಡ್ಯ ಜಿಲ್ಲೆಯ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಅಧೀನ ಶ್ರೀರಂಗಪಟ್ಟಣ) ವಾರದಲ್ಲಿ ಒಂದು ದಿನ ಕೆಆರ್ ಪೇಟೆ ನ್ಯಾಯಾಲಯದಲ್ಲಿ ಪ್ರಾರಂಭವಾಗಲಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಮಂಡ್ಯ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ತಿಳಿಸಿದರು.
ಕೆ ಆರ್ ಪೇಟೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ಏರ್ಪಡಿಸಿದ ವಕೀಲರು ಮತ್ತು ನ್ಯಾಯಾಧೀಶರ ನಡುವೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ನ್ಯಾಯಾಲಯಕ್ಕೆ ಶ್ರೀರಂಗಪಟ್ಟಣಕ್ಕೆ ಕಕ್ಷಿದಾರರು ಮತ್ತು ವಕೀಲರು ಹೋಗಿ ಬರಲು ತುಂಬಾ ತೊಂದರೆ ಆಗುತ್ತಿತ್ತು ಇದನ್ನು ವಕೀಲರ ಸಂಘದ ಸದಸ್ಯರು ಹಲವಾರು ವರ್ಷಗಳಿಂದ ಜಿಲ್ಲಾ ನ್ಯಾಯಾಲಯ ಕೆಆರ್ ಪೇಟೆ ಪಟ್ಟಣದಲ್ಲಿ ಪ್ರಾರಂಭಿಸುವಂತೆ ಪ್ರಯತ್ನಿಸಿದ್ದರು. ಇದಕ್ಕೆ ವಕೀಲರ ಸಂಘದ ಪದಾಧಿಕಾರಿಗಳು ಹಲವಾರು ಬಾರಿ ಒತ್ತಾಯ ಮಾಡಿ ವಸ್ತು ಸ್ಥಿತಿಯನ್ನು ತಿಳಿಸಿದ್ದರಿಂದ ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ದಿನ ಜಿಲ್ಲಾ ನ್ಯಾಯಾಲಯ ಕಾರ್ಯನಿರ್ವಹಿಸಲು ಮಂಜೂರಾತಿ ನೀಡಿದ್ದು ಇದನ್ನು ವಕೀಲರು ಮುನ್ನಡೆಸಿಕೊಂಡು ಹೋಗಲು ಶ್ರಮಿಸಬೇಕು ಎಂದು ನ್ಯಾ. ಸುನಿಲ್ ದತ್ ಯಾದವ್ ತಿಳಿಸಿದರು.

ಕರ್ನಾಟಕ ರಾಜ್ಯವಕೀಲರ ಪರಿಷತ್ ಉಪಾಧ್ಯಕ್ಷ ಶಿವಮೂರ್ತಿ ಮಾತನಾಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶ್ರೀರಂಗಪಟ್ಟಣಕ್ಕೆ ಹೋಗಿ ಕಾರ್ಯಕಲಾಪಗಳನ್ನು ನಡೆಸಲು ವಕೀಲರು ಮತ್ತು ಕಕ್ಷಿದಾರರಿಗೆ ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ವಕೀಲರು ಹಲವಾರು ಬಾರಿ ಪ್ರಯತ್ನಪಟ್ಟು ಜಿಲ್ಲಾ ನ್ಯಾಯಾಲಯಕ್ಕೆ ಶ್ರಮಿಸಿದ್ದಾರೆ. ವಕೀಲರ ಪರಿಶ್ರಮದಿಂದ 2021 ಸಾಲಿನಲ್ಲಿ ಜಿಲ್ಲಾ ನ್ಯಾಯಾಲಯ ಮಂಜೂರಾಗಿದ್ದರು ಹಣಕಾಸು ಇಲಾಖೆಯ ಆಡಳಿತಾತ್ಮಕ ಅನುಮೋದನೆ ಹಾಗೂ ಸಿಬ್ಬಂದಿಯ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಇದನ್ನು ನ್ಯಾಯಮೂರ್ತಿಗಳಾದ ಸುನಿಲ್ ದತ್ ಯಾದವ್ ರವರು ವಾರದಲ್ಲಿ ಒಂದು ದಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಸಲು ಅನುಮೋದನೆ ನೀಡಿರುವುದು ಕಾರ್ಯಕಲಾಪಕ್ಕೆ ಅನುಕೂಲಕರವಾಗಿದ್ದು ಇದನ್ನು ವಕೀಲರು ಮುನ್ನಡೆಸಿಕೊಂಡು ಶಾಶ್ವತವಾಗಿ ನ್ಯಾಯಾಲಯವು ಕಾರ್ಯನಿರ್ವಹಿಸುವಂತೆ ತಿಳಿಸಿದ ಶಿವಮೂರ್ತಿ ವಕೀಲರು ವಸ್ತ್ರ ಸಂಹಿತೆಯನ್ನು ಅಳವಡಿಸಿಕೊಂಡು ಶಿಸ್ತು ಬದ್ಧ ವಕೀಲ ವೃತ್ತಿಯನ್ನು ಮುನ್ನಡೆಸಿಕೊಂಡು ಹೋಗುವಂತೆ ವಕೀಲರಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆ ಆರ್ ಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ ಆರ್ ನಾಗೇಗೌಡ ಮಾತನಾಡಿ 2021ನೇ ಸಾಲಿನಿಂದ ಜಿಲ್ಲಾ ನ್ಯಾಯಾಲಯ ಪ್ರಾರಂಭಿಸಲು ಶ್ರಮಿಸಿದ ವಕೀಲರುಗಳಿಗೆ ಕೃತಜ್ಞತೆಗಳನ್ನು ತಿಳಿಸಿ, ಕೆ ಆರ್ ಪೇಟೆ ತಾಲೂಕಿಗೆ ಸಂಬಂಧಪಟ್ಟ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣವು ನಡೆಸಲು ಶ್ರೀರಂಗಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯತೆ ಇತ್ತು, ಇನ್ನು ಮುಂದೆ ಕೆ ಆರ್ ಪೇಟೆ ನ್ಯಾಯಾಲಯದಲ್ಲೇ ನಡೆಯುವುದರಿಂದ ಕಕ್ಷಿದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಂದು ನಾಗೇಗೌಡ ತಿಳಿಸಿದರು.

ವಕೀಲರ ಮತ್ತು ನ್ಯಾಯಾಧೀಶರ ನಡುವೆ ಸಂವಾದ ನಡೆದು ವಕೀಲರ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರದ ಮಾರ್ಗಗಳನ್ನು ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು.
ಕಾರ್ಯಕ್ರಮಕ್ಕೆ ಮುನ್ನ ನ್ಯಾಯಾಲಯಕ್ಕೆ ಭೇಟಿ ನೀಡಿದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸುನಿಲ್ ದತ್ ಯಾದವ್ ರವರು ನ್ಯಾಯಾಧೀಶರಾದ ಸುಧೀರ್, ದೇವರಾಜು, ಡಾ. ಚಂದಿನಿ, ಸುಷ್ಮಾ, ಪಾರ್ವತಿ, ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕಿ ನಂದಿನಿ ಮತ್ತು ಸಿಬ್ಬಂದಿಗಳೊಡನೆ ಚರ್ಚಿಸಿ ದರು.
ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ತು ಉಪಾಧ್ಯಕ್ಷ ಶಿವಮೂರ್ತಿ, ಸದಸ್ಯ ಮಹದೇವ್ ಪ್ರಸಾದ್, ವಕೀಲ ಸಂಘದ ಅಧ್ಯಕ್ಷ ಎಂ ಆರ್ ನಾಗೇಗೌಡ, ಉಪಾಧ್ಯಕ್ಷ ಪುರುಷೋತ್ತಮ್, ಖಜಾಂಚಿ ಪ್ರಸನ್ನ ಕುಮಾರ್, ಜಂಟಿ ಕಾರ್ಯದರ್ಶಿ ದೊಡ್ಡಯ್ಯ, ನಿರ್ದೇಶಕರುಗಳಾದ ಶಿವಕುಮಾರ್, ಬಿ.ಜೆ ಪ್ರವೀಣ್ , ಗಿರಿಜಾ ಪ್ರತಾಪ್, ಅವಿನಾಶ್, ಜನಾರ್ಧನ್ ಸೇರಿದಂತೆ ಹಿರಿಯ ನ್ಯಾಯವಾದಿಗಳು ಹಾಗೂ ಕಿರಿಯ ಮತ್ತ ಹಿಳಾ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್.
