ಚನ್ನರಾಯಪಟ್ಟಣ: ನವೋದಯ ವಿದ್ಯಾಸಂಸ್ಥೆಯ ನಿರ್ದೇಶಕ ಕಾಳೇನಹಳ್ಳಿ ಆನಂದ್ ಕುಮಾರ್ ನೇತೃತ್ವದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಆನಂದ್ ಕುಮಾರ್, ಇದೇ ತಿಂಗಳ 14ರಿಂದ 16ರವರೆಗೆ ತಾಲೂಕಿನ ಕಬ್ಬಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತಾಲೂಕಿನ ಸಮಸ್ತ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನವೋದಯ ವಿದ್ಯಾಸಂಸ್ಥೆಯ ವತಿಯಿಂದ ರಥಕ್ಕೆ ಅದ್ದೂರಿ ಸ್ವಾಗತ ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪನ್ಯಾಸಕರು, ಬೋಧಕ ವರ್ಗದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದ ಅರ್ಪಿಸಿದರು. ಶ್ರೀ ಬಸವೇಶ್ವರ ಸ್ವಾಮಿಯು ತಾಲೂಕಿನ ಸಮಸ್ತ ಜನತೆಗೆ ಒಳಿತನ್ನು ಕರುಣಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಮುರಾಜಿ ಮಂಜಣ್ಣ, ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ್, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆನಂದ್ ಕಾಳೇನಹಳ್ಳಿ, ಉಪಪ್ರಾಂಶುಪಾಲ ಸ್ವಾಗತಹಳ್ಳಿ ಸುರೇಶ್, ಬಿಜಿಎಸ್ ಬ್ಯಾಂಕ್ ನಿರ್ದೇಶಕ ವಡ್ಡರಹಳ್ಳಿ ಸುಧಾಕರ್ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
