ಚನ್ನರಾಯಪಟ್ಟಣ: ಮಿಲ್ಲತ್ ಚಾರಿಟೇಬಲ್ ಅಂಡ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ನಗರದ ಬಾಗೂರು ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಕಾತ್ ಹಣದ ಮೂಲಕ 20 ಕಡುಬಡವ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಆರ್ಥಿಕವಾಗಿ ಹಿಂದುಳಿದ ನಾಲ್ವರು ಪುರುಷರಿಗೆ ತಳ್ಳುವ ಗಾಡಿಗಳನ್ನು ವಿತರಿಸಲಾಯಿತು. ಅಲ್ಲದೆ, ನಿರ್ಗತಿಕ ಮಹಿಳೆಯರಿಗೆ ನಗದು ಸಹಾಯಧನವನ್ನೂ ನೀಡಲಾಯಿತು.

ಕಾರ್ಯಕ್ರಮವನ್ನು ಖುರಾನ್ ಪಠಣದೊಂದಿಗೆ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆರಿಫುಲ್ಲಾ ಅನ್ಸಾರಿ, ಕಳೆದ ಆರು ವರ್ಷಗಳಿಂದ ಟ್ರಸ್ಟ್ ಕೈಗೊಂಡಿರುವ ಸಮಾಜಮುಖಿ ಸೇವಾ ಕಾರ್ಯಗಳು ಹಾಗೂ ಸಂಸ್ಥೆಯ ಉದ್ದೇಶಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಮನ್ಸೂರ್ ಪಾಷಾ, ಕಾರ್ಯದರ್ಶಿ ಮುಬಷೀರ್ ಅಹ್ಮದ್, ಖಜಾಂಚಿ ಆರಿಫುಲ್ಲಾ ಅನ್ಸಾರಿ, ಉಪಾಧ್ಯಕ್ಷ ಮೊಹಸಿನ್ ಪಾಷ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಹಾಗೂ ಜಾಮಿಯಾ ಮಸೀದಿಯ ಮುಖಂಡರು ಉಪಸ್ಥಿತರಿದ್ದರು.

– ಮಂಜುನಾಥ್ ಐ.ಕೆ.
