ಹಾಸನ: ನಗರದ ದೇವಗೆರೆಯಲ್ಲಿ ಇಂದು ಸಂಜೆ ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ತೆಪ್ಪೋತ್ಸವ ಧಾರ್ಮಿಕ ಸಂಭ್ರಮದಿಂದ ನೆರವೇರಿತು. ದೇವರ ತೆಪ್ಪೋತ್ಸವ ಐದು ಸುತ್ತು ನಡೆಯುವ ಮೂಲಕ ಭಕ್ತರ ಗಮನ ಸೆಳೆಯಿತು.
ತೆಪ್ಪೋತ್ಸವದ ಬಳಿಕ 300ಕ್ಕೂ ಹೆಚ್ಚು ಮಹಿಳೆಯರು ಕಳಸ ಹಾಗೂ ಕುಂಭಗಳನ್ನು ಹೊತ್ತು, ದೇವರ ನಡೆಮುಡಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವಿಧ ಕಲಾತಂಡಗಳು, ನಂದಿಧ್ವಜ ಹಾಗೂ ವೇದಘೋಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಹಾಸನಾಂಬೆ ದೇವಸ್ಥಾನ ಹಾಗೂ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣ ತಲುಪಿತು.

ಈ ಸಂದರ್ಭದಲ್ಲಿ ಕಳಸ ಹೊತ್ತ ಮಹಿಳೆಯರು ಹಾಸನಾಂಬೆ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.
ಕಾರ್ಯಕ್ರಮದಲ್ಲಿ ಹಾಸನ ತಹಸೀಲ್ದಾರ್ ಗೀತಾ, ಸಿದ್ದೇಶ್ವರ ದೇವಸ್ಥಾನದ ಅರ್ಚಕರಾದ ಪ್ರಕಾಶ್, ಶಶಿಕುಮಾರ್, ಮಾಜಿ ಶಾಸಕ ಪ್ರೀತಂ ಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಶ್ರೀ ಸಿದ್ದೇಶ್ವರ ದೇವಸ್ಥಾನದ ಪಟೇಲ್ ವಂಶಸ್ಥರು, ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಉತ್ಸವಕ್ಕೆ ಜಿಲ್ಲಾಡಳಿತದಿಂದ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರ ಸುರಕ್ಷತೆಗಾಗಿ ಬೋಟ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.
- ಕುಮಾರಸ್ವಾಮಿ ಎಂ.ಎನ್.
